ಕರಾವಳಿ

ಉಳ್ಳಾಲದಲ್ಲಿ ಒಂದೇ ಮನೆಯ 16 ಮಂದಿಯಲ್ಲಿ ಸೋಂಕು ಪತ್ತೆ : ಇಬ್ಬರು ಪೊಲೀಸರಿಗೂ ಪಾಸಿಟಿವ್

Pinterest LinkedIn Tumblr

ಮಂಗಳೂರು /ಉಳ್ಳಾಲ, ಜೂನ್ 27 : ಉಳ್ಳಾಲದ ಪ್ರಥಮ ಸೋಂಕಿತೆಯ ಮನೆಯಲ್ಲಿದ್ದ ಎಲ್ಲಾ 16 ಮಂದಿ ಸದಸ್ಯರಿಗೆ ಸೋಂಕು ತಗುಲಿದ್ದು, ಮಹಿಳೆ ಸೇರಿದಂತೆ ಒಂದೇ ಮನೆಯ 17 ಸದಸ್ಯರಿಗೆ ಸೋಂಕು ದೃಢಪಟ್ಟಿದೆ. ಉಳ್ಳಾಲದಲ್ಲಿ ಕೊರೋನಾ ವೈರಸ್ ಅಬ್ಬರದಿಂದ ಅಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಉಳ್ಳಾಲ ಆಝಾದ್ ನಗರದ 57ರ ಹರೆಯದ ಮಹಿಳೆಗೆ ಆರಂಭದಲ್ಲಿ ಸೋಂಕು ತಗುಲಿತ್ತು. ಅವರು ನಗರದ ವೆನ್‍ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಮನೆಯಲ್ಲಿದ್ದ ಒಟ್ಟು 16 ಮಂದಿ ಸದಸ್ಯರಿಗೆ ಇಂದು ಸೋಂಕು ದೃಢವಾಗಿದ್ದು ಮನೆಯ ಎಲ್ಲಾ ಸದಸ್ಯರನ್ನು ನಗರದ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಒಂದೇ ಮನೆಯ 17 ಜನರಿಗೆ ಸೋಂಕು ದೃಡಪಟ್ಟಂತಾಗಿದೆ.

ಸೋಂಕಿತರಲ್ಲಿ 8 ಮಂದಿ ಆಪ್ರಾಪ್ತ ಮಕ್ಕಳಿದ್ದು, ಎಂಟು ಜನರು 20 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.ಈ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಉಳ್ಳಾಲ ವ್ಯಾಪ್ತಿಯಲ್ಲಿ ಪೊಲೀಸರು ಸೇರಿದಂತೆ 22 ಮಂದಿಯಲ್ಲಿ ಶನಿವಾರ ಸೋಂಕು ದೃಡವಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ, ದೇರಳಕಟ್ಟೆ, ಅಸೈಗೋಳಿ ಸೇರಿ ಸೋಂಕಿತರ ಸಂಖ್ಯೆ 29ಕ್ಕೇರಿದ್ದು ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳಿಗೆ ಈ ಹಿಂದೆ ಸೋಂಕು ತಗುಲಿತ್ತು. ಇವರ ಸಂಪರ್ಕ ದಲ್ಲಿದ್ದ ಇಬ್ಬರು ಸಿಬ್ಬಂದಿಗಳಿಗೆ ಶನಿವಾರ ಸೋಂಕು ದೃಢಪಟ್ಟಿತ್ತು. ಉಳಿದಂತೆ ವಿದೇಶದಿಂದ ಆಗಮಿಸಿ ಉಳ್ಳಾಲದ ಖಾಸಗಿ ರೆಸಾರ್ಟ್‍ನಲ್ಲಿ ಕ್ವಾರಂಟೈನ್‍ಲ್ಲಿರುವ ಕೃಷ್ಣಾಪುರ ಮೂಲದ ಇಬ್ಬರಿಗೆ ಸೋಂಕು ದೃಡವಾಗಿದೆ. ದೇರಳಕಟ್ಟೆಯ ಖಾಸಗಿ ಆಹಾರ ತಯಾರಿಕ ಸಂಸ್ಥೆಯ ಇಬ್ಬರಿಗೆ ಸೋಂಕು ದೃಢವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಝಾದ್ ನಗರದ ಸುಮಾರು 200 ಮನೆಗಳ ನಿವಾಸಿಗಳನ್ನು ಸ್ವಯಂ ಲಾಕ್‍ಡೌನ್ ಮಾಡಿದ್ದು, ಈ ಪ್ರದೇಶಕ್ಕೆ ಯಾರು ತೆರಳದಂತೆ ಉಳ್ಳಾಲ ನಗರಸಭೆಯ ಅಧಿಕಾರಿಗಳು ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದಾರೆ.

Comments are closed.