ಕರಾವಳಿ

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ದ.ಕ ರೆಡ್‍ಕ್ರಾಸ್ ಘಟಕದಿಂದ ಸ್ಯಾನಿಟೈಸರ್ ಸ್ಟ್ಯಾಂಡ್ ವಿತರಣೆ

Pinterest LinkedIn Tumblr

ಮಂಗಳೂರು, ಜೂನ್. 23: ಮಂಗಳೂರು ಉತ್ತರ ವಲಯದ ವ್ಯಾಪ್ತಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ರೆಡ್‍ಕ್ರಾಸ್ ಘಟಕದ ವತಿಯಿಂದ 25 ಸ್ಯಾನಿಟೈಸರ್ ಸ್ಟ್ಯಾಂಡ್, ಸ್ಯಾನಿಟೈಸರ್ ಬಾಟಲ್‍ಗಳು ಹಾಗೂ 1400 ಮಾಸ್ಕ್‍ಗಳನ್ನು ರೆಡ್‍ಕ್ರಾಸ್ ಕಚೇರಿಯಲ್ಲಿ ಜೂನ್ 23ರಂದು ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಹಸ್ತಾಂತರಿಸಲಾಯಿತು.

ಮಂಗಳೂರು ನಗರ ದಕ್ಷಿಣದ ಶಾಸಕ ವೇದವ್ಯಾಸ್ ಕಾಮತ್ ಮತ್ತು ಮಂಗಳೂರು ನಗರ ಉತ್ತರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಇದನ್ನು ಹಸ್ತಾಂತರಿಸಿದರು.

ಬಳಿಕ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಶಾಲೆಗಳಿಗೆ ಕಾಯಂ ಆಗಿ ಒದಗಿಸಲಾಗಿರುವ ಈ ಸ್ಯಾನಿಟೈಸರ್ ಸ್ಟ್ಯಾಂಡ್‍ಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂದರ್ಭ ಸುಮಾರು 6600 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ದ. ಕ. ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವುದರಲ್ಲಿ ಮಾದರಿ ಸಂಸ್ಥೆಯಾಗಿದೆ.

ವೆನ್‍ಲಾಕ್‍ನಲ್ಲಿ ಹೆಲ್ಫ್‍ಡೆಸ್ಕ್, ಬ್ಲಡ್ ಬ್ಯಾಂಕ್ ಸೇರಿದಂತೆ ನಾನಾ ಜನಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ರೆಡ್‍ಕ್ರಾಸ್ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಇದರ ನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ರೆಡ್‍ಕ್ರಾಸ್‍ನ ಸ್ವಂತ ಕಟ್ಟಡಕ್ಕೆ ಇಲ್ಲಿನ ಸಂಸದರು, ಉಸ್ತುವಾರಿ ಸಚಿವರು, ಎಲ್ಲಾ ಶಾಸಕರು ಪೂರ್ಣ ಸಹಕಾರ, ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಶಾಸಕ ಡಾ. ವೈ ಭರತ್ ಶೆಟ್ಟಿ ಮಾತನಾಡಿ, ದ. ಕ. ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲೆಯ ಜನತೆಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಸ್ವರ್ಥರಹಿತ ಸೇವೆ ಮಾಡುತ್ತಿರುವುದು ಶ್ಲಾಘನೀಯ. ರಾಜ್ಯದಲ್ಲಿಯೇ ಅತ್ಯುತ್ತಮ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ರೆಡ್‍ಕ್ರಾಸ್ ಘಟಕಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ರೆಡ್‍ಕ್ರಾಸ್ ಘಟಕದ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ರೆಡ್‍ಕ್ರಾಸ್ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಗರಿಕರಿಗೆ ಎಲ್ಲಾ ರೀತಿಯ ನೆರವನ್ನು ನೀಡುತ್ತಿದೆ. ಇದೀಗ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಸ್ಯಾನಿಟೈಸರ್, ಅದರ ಸ್ಟ್ಯಾಂಡ್ ಹಾಗೂ ಮಾಸ್ಕ್‍ಗಳನ್ನು ವಿತರಿಸಲಾಗಿದೆ ಎಂದರು.

ಈ ಸಂದರ್ಭ ರೋಟರಿ ಡಿಸ್ಟ್ರಿಕ್ಟ್ 3181 ಇದರ ಗವರ್ನರ್ ರಂಗನಾಥ್ ಭಟ್, ಮಂಗಳೂರು ಮಹಾನಗರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್, ದಕ್ಷಿಣ ಕನ್ನಡ ಜಿಲ್ಲಾ ರೆಡ್‍ಕ್ರಾಸ್ ಘಟಕದ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಪ್ರಚಾರ ಮತ್ತು ಸಾರ್ವಜನಿಕ ಸಂರ್ಪಕ ವಿಭಾಗದ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜ, ರೆಡ್‍ಕ್ರಾಸ್ ಸಿಬ್ಬಂದಿಗಳಾದ ಪ್ರವೀಣ್, ಮಲ್ಲಿಕಾ, ದೀಕ್ಷಿನ್, ಧೃತಿ, ಸೋನಿ, ದುಲ್ಸಿನ್ ಉಪಸ್ಥಿತರಿದ್ದರು.

Comments are closed.