ಕರಾವಳಿ

ಜಿಲ್ಲೆಯ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಟಾಸ್ಕ್‌ಫೋರ್ಸ್ ಅಧಿಕಾರಿಗಳಿಂದ ದಾಳಿ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ಉಪ ಖನಿಜ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ನಿಯಂತ್ರಿಸುವ ಕುರಿತು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸಭೆಯಲ್ಲಿ ಅನಧಿಕೃತ ಮರಳುಗಾರಿಕೆ ಹಾಗೂ ಸಾಗಾಣಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡಗಳು ಕೈಗೊಂಡ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.

ತಂಡಗಳು ಪ್ರತಿ ನಿತ್ಯವು ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದು, ದಿನಾಂಕ 18/06/2020ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿಗಳ ಎರಡು ತಂಡಗಳು ಮೂಡಬಿದ್ರೆ ತಾಲ್ಲೂಕಿನ ನಿಡ್ಡೋಡಿ, ನೀರುಡೆ ಪ್ರದೇಶಗಳಲ್ಲಿ ಮತ್ತು ಪುತ್ತೂರು ತಾಲ್ಲೂಕಿನ ಪಡುವನ್ನೂರು ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಕಲ್ಲು ಗಣಿ ಪ್ರದೇಶಗಳನ್ನು ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿರುತ್ತಾರೆ.

ಮಂಗಳೂರು ತಹಶೀಲ್ದಾರ್ ರವರ ನೇತೃತ್ವದ ತಂಡವು ದಿನಾಂಕ 17/06/2020ರಂದು ಅಡ್ಯಾರ್, ಶಾಂಭವಿ ನದಿ, ಮಳವೂರು, ಆದ್ಯಪಾಡಿ ಡ್ಯಾಂ ಪ್ರದೇಶಗಳಲ್ಲಿ ತೀವ್ರ ಕಾರ್‍ಯಾಚರಣೆ ನಡೆಸಿದ್ದು, ಆ ಸಮಯದಲ್ಲಿ ನದಿಯ ದಂಡೆಗಳಲ್ಲಿ ದೋಣಿಗಳನ್ನು ಇರಿಸಿರುವುದು ಕಂಡು ಬಂದಿರುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿರುತ್ತಾರೆ.

ಆದ್ದರಿಂದ ನೇತ್ರಾವತಿ, ಫಲ್ಗುಣಿ/ ಗುರುಪುರ ಹಾಗೂ ಶಾಂಭವಿ ನದಿಗಳ ದಂಡೆಯಾದ ಸರ್ಕಾರಿ ಜಮೀನಿನಲ್ಲಿ ಇರಿಸಿರುವ ದೋಣಿಗಳನ್ನು ಅನಧಿಕೃತ ಮರಳುಗಾರಿಕೆಗೆ ಬಳಸುವ ಸಾಧ್ಯತೆ ಇರುತ್ತದೆ. ಆದುದರಿಂದ ಸದರಿ ದೋಣಿಗಳನ್ನು ಸಂಬಂಧಪಟ್ಟ ಮಾಲೀಕರು ಕೂಡಲೇ ತೆರವುಗೊಳಿಸಬೇಕಾಗಿರುತ್ತದೆ. ಇಲ್ಲವಾದಲ್ಲಿ ಯಾವುದೇ ಮುನ್ನೆಚ್ಚರಿಕೆ ನೀಡದೆ ಅಂತಹ ದೋಣಿಗಳನ್ನು ಸರ್ಕಾರವು ವಶಪಡಿಸಿಕೊಳ್ಳುವುದಾಗಿ ಸಭೆಯಲ್ಲಿ ತೀರ್ಮಾನಿಸಿರುವುದರಿಂದ ಅದರಂತೆ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments are closed.