ಕರಾವಳಿ

ಬೆಂಗಳೂರಿನಿಂದ ಹುಟ್ಟೂರು ಕೋಟೇಶ್ವರಕ್ಕೆ ಬರುತ್ತಿರುವಾಗ ಬಸ್ಸಿನಲ್ಲೇ ಟೆಕ್ಕಿ ಸಾವು-ಹೃದಯಾಘಾತ ಶಂಕೆ

Pinterest LinkedIn Tumblr

ಕುಂದಾಪುರ: ಬೆಂಗಳೂರಿನಿಂದ ಕುಂದಾಪುರಕ್ಕೆ ಖಾಸಗಿ ಬಸ್ ವೊಂದರಲ್ಲಿ ಪ್ರಯಾಣ ಬೆಳೆಸಿದ್ದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಬಸ್ ನಲ್ಲೇ ಅಸ್ವಸ್ಥಗೊಂಡು ಸಾವನ್ನಪ್ಪಿದ ದಾರುಣ ಘಟನೆ ಕುಂದಾಪುರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

ಸಾವನ್ನಪ್ಪಿದ ಯುವಕ ಕೋಟೇಶ್ವರ ಕುಂಬ್ರಿ ನಿವಾಸಿ ವಿಷ್ಣುಮೂರ್ತಿ ಆಚಾರ್ ಎನ್ನುವರ ಪುತ್ರ ಚೈತನ್ಯ (25) ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲೇ ಇಂಜಿನಿಯರ್ ಶಿಕ್ಷಣ ಪಡೆದ ಚೈತನ್ಯ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಮಾರತಹಳ್ಳಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ದುಡಿಯುತ್ತಿದ್ದರು. ಕೆಲಸ‌ ಕಡಿಮೆ ಇರುವ‌ ಕಾರಣ ಹೇಳಿ ಮನೆಗೆ ಬರುವುದಾಗಿ ತಿಳಿಸಿದ್ದ ಚೈತನ್ಯ ಆನ್‌ಲೈನ್ ನಲ್ಲಿ ಬಸ್ ಟಿಕೆಟ್ ಕಾಯ್ದಿರಿಸಿದ್ದರು. ಅಂತೆಯೇ ಸೋಮವಾರ ರಾತ್ರಿ ಖಾಸಗಿ ಬಸ್ನಲ್ಲಿ ಊರಿಗೆ ತೆರಳಿದ್ದ ಅವರು ಬೆಳಿಗ್ಗೆ 6.30ರ ಸುಮಾರಿಗೆ ಕರೆ‌ಮಾಡಿ ಬಾರ್ಕೂರು ಸಮೀಪ ಬರುತ್ತಿರುವುದಾಗಿ ತಿಳಿಸಿದ್ದರು. ಚೈತನ್ಯ ಕೋಟೇಶ್ವರದಲ್ಲಿ ಇಳಿಯದ ಹಿನ್ನೆಲೆ ನಿರ್ವಾಹಕ ಅನುಮಾನಗೊಂಡು ಹತ್ತಿರ ಬಂದಾಗ ಅಸ್ವಸ್ಥಗೊಂಡು ಮಲಗಿದ್ದರು ಎನ್ನಲಾಗಿದೆ. ಕೂಡಲೇ ಮನೆಯವರ ಕರೆಯನ್ನು ಸ್ವೀಕರಿಸಿ ವಿಷಯ ಮುಟ್ಟಿಸಿ ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ‌ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.‌ ಕೋವಿಡ್ ಹಿನ್ನೆಲೆ ಆಸ್ಪತ್ರೆಯನ್ನು ಸ್ಥಳಾಂತರಿಸಿದ್ದರಿಂದ ಅಲ್ಲೇ ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಚೈತನ್ಯ ಸಾವನ್ನಪ್ಪಿರುವುದಾಗಿ ವೈದ್ಯರು ದೃಡಪಡಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಸಾವಿನ ನಿಖರ ಕಾರಣಗಳಿಗಾಗಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.

ಮೂಲತಃ ಬ್ರಹ್ಮಾವರ ಬಿರ್ತಿ ನಿವಾಸಿಯಾಗಿರುವ ವಿಷ್ಣುಮೂರ್ತಿ ಆಚಾರ್ ದೇವಸ್ಥಾನವೊಂದರ ಕ್ಲರ್ಕ್ ಆಗಿ ಕಳೆದ ಕೆಲ ವರ್ಷಗಳಿಂದ ಕೋಟೇಶ್ವರದ ಕುಂಬ್ರಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹಿರಿಯ ಮಗಳು ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು, ಇನ್ನೊಬ್ಬ ಮಗಳು ಆಯುರ್ವೇದ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

ಮೃತ ಚೈತನ್ಯ ತಂದೆ, ತಾಯಿ, ಇಬ್ಬರು ಸಹೋದರಿ, ಕುಟುಂಬಿಕರು ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ.

Comments are closed.