ಮಂಗಳೂರು : ಜೂನ್ 5ರಂದು ಮೂಲ್ಕಿ ಹೆಚ್ ಡಿ ಎಫ್ ಸಿ ಬ್ಯಾಂಕ್ ಮುಂಭಾಗ ಮೂಡಬಿದಿರೆಯ ಉದ್ಯಮಿ ಅಬ್ದುಲ್ ಲತೀಫ್ ಎಂಬವರನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆಯನ್ನು ಖಂಡಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ದ.ಕ ಜಿಲ್ಲಾ ಸಮಿತಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದೆ.
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಮೂಲತಃ ಸುಳ್ಯ ತಾಲೂಕಿನ ಯುವಕನಾದ ಅಬ್ದುಲ್ ಲತೀಫ್ ನನ್ನು ಹಾಡಹಗಲೇ ಅಮಾನುಷವಾಗಿ ಹತ್ಯೆಗೈದ ಘಟನೆಯು ಖಂಡನೀಯ ವಾಗಿದೆ.
ಒಂದೇ ಊರಿನ ಎರಡು ಬಣಗಳ ನಡುವಿನ ವೈಯುಕ್ತಿಕ ದ್ವೇಷದಿಂದ ನಡೆದ ಜಗಳದಲ್ಲಿ ಅಮಾಯಕ ಯುವಕನ ಬಲಿಯಾಗಿದೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ಅಫೀಮು,ಗಾಂಜಾಗಳ ಮಾಫಿಯಾದಿಂದ ಹಲವು ಯುವಕರು, ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ ಆದರೆ ಈ ಮಾಫಿಯಾವನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ.ಅದಲ್ಲದೆ ಮಾದಕ ದ್ರವ್ಯ ಗಳ ಪೂರೈಕೆಗೆ ಕೆಲವು ಪೋಲಿಸ್ ಸಿಬ್ಬಂದಿಗಳು ಶಾಮೀಲಾಗಿರುವುದು ಸಾರ್ವಜನಿಕವಾಗಿ ಹಲವು ಬಾರಿ ಚರ್ಚೆ ಆಗುತ್ತಿದ್ದು ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಕೊಟ್ಟಿದ್ದರೂ ಕೂಡ ಸೂಕ್ತ ಕ್ರಮ ಕೈಗೊಳ್ಳದಿರುವುದು ಖೇದಕರವಾಗಿದೆ.
ಇಂತಹ ಪೋಲಿಸ್ ಸಿಬ್ಬಂದಿಗಳನ್ನು ಉನ್ನತ ಅಧಿಕಾರಿಗಳು ಪತ್ತೆ ಮಾಡಿ ತನಿಖೆಗೆ ಒಳಪಡಿಸಬೇಕು ಮತ್ತು ಮಾದಕ ದ್ರವ್ಯದ ಮಾಫಿಯಾ ವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು.
ಮುಲ್ಕಿಯಲ್ಲಿ ಘಟನೆ ನಡೆದು ಇಪ್ಪತ್ತ ನಾಲ್ಕು ಗಂಟೆಯೊಳಗೆ ನಾಲ್ಕು ಆರೋಪಿಗಳನ್ನು ಪೋಲಿಸ್ ಇಲಾಖೆ ಬಂಧಿಸಿರುವುದು ಸ್ವಾಗತಾರ್ಹ ಆದರೆ ಘಟನೆ ನಡೆದಲ್ಲಿಂದ ಕೆಲವೇ ನಿಮಿಷದ ದಾರಿಯಿರುವ ಪ್ರದೇಶದಲ್ಲಿ ಪೊಲೀಸ್ ಠಾಣೆ ಇದ್ದರೂ ಹತ್ಯೆ ಕೃತ್ಯವನ್ನು ತಡೆಯಲು ವಿಫಲವಾಗಿದೆ.
ಆದುದರಿಂದ ಪೊಲೀಸ್ ಇಲಾಖೆ ಈ ಘಟನೆಗೆ ಕುಮ್ಮಕ್ಕು ನೀಡಿದ ಮತ್ತು ಪ್ರಚೋದನೆ ನೀಡಿದ ಪ್ರಮುಖ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಈ ಹತ್ಯೆ ಯಾವ ಕಾರಣಕ್ಕಾಗಿ ,ಯಾಕಾಗಿ ಸಂಭವಿಸಿತು ಎಂಬುದು ನಿಗೂಢವಾಗಿದೆ ಇದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು.
ಆರೋಪಿಗಳು ರಾಜಕೀಯ ವಾಗಿ ಪ್ರಭಾವಿ ಹಿನ್ನೆಲೆಯಲ್ಲಿರುವರು ಎಂಬ ಮಾಹಿತಿಯು ಇದೆ.ಹಾಗಾಗಿ ಪೋಲಿಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಮಾದಕ-ಗಾಂಜಾ ಮಟ್ಟಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಜರಗಿಸಬೇಕು.
ಮುಂದಿನ ದಿನಗಳಲ್ಲಿ ಈ ರೀತಿಯ ದುರ್ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಕಾರ್ಯದರ್ಶಿ ಸಾಹುಲ್ ಎಸ್ ಎಚ್ ಆಗ್ರಹಿಸಿದ್ದಾರೆ.
Comments are closed.