ಕರಾವಳಿ

ಲಾಕ್‌ಡೌನ್ ಸಡಿಲಗೊಂಡರೂ ಬಿಕೋ ಎನ್ನುತ್ತಿರುವ ಕುಂದಾಪುರ ಬಸ್‌ನಿಲ್ದಾಣ; ವ್ಯಾಪಾರಸ್ಥರು ಕಂಗಾಲು !

Pinterest LinkedIn Tumblr

ಕುಂದಾಪುರ: ಕರೋನಾ ಮಹಾಮಾರಿಯಿಂದಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಘೋಷಿಸಲ್ಪಟ್ಟ ನಂತರ ನೀರವ ವಾಗಿದ್ದ ಕುಂದಾಪುರದ ಹೊಸ ಬಸ್ಸು ನಿಲ್ದಾಣ ಇದೀಗ ಲಾಕ್ ಡೌನ್ ಕಟ್ಟು ನಿಟ್ಟು ಹಿಂತೆಗೆಯಲ್ಪಟ್ಟು ಬೆರಳೆಣಿಕೆಯಷ್ಟು ಬಸ್ಸುಗಳ ಓಡಾಟ ಆರಂಭಗೊಂಡರೂ ಪ್ರಯಾಣಿಕರಿಲ್ಲದೆ ಬಿಕೋಯೆನ್ನುತ್ತಿದೆ. ಇದರಿಂದಾಗಿ ಪುರಸಭೆಗೆ ಮಾಸಿಕ ಸಾವಿರಾರು ರೂಪಾಯಿ ಬಾಡಿಗೆ ಸಲ್ಲಿಸುವ ಬಸ್ಸು ನಿಲ್ದಾಣದ ಒಳಗಿನ ಅಂಗಡಿ ವ್ಯಾಪಾರಸ್ಥರು ಮಾತ್ರ ದಿಕ್ಕು ತೋಚದಂತಾಗಿ ಚಡಪಡಿಸುತ್ತಿದ್ದಾರೆ.

ಅನಿರೀಕ್ಷಿತ ಲಾಕ್ ಡೌನ್ ಆರಂಭ ಗೊಂಡು ಅಂಗಡಿಗಳಿಗೆ ದಿಢೀರ್ ಶಟರ್ ಎಳೆದಿದ್ದರಿಂದ ಅಂಗಡಿಯಲ್ಲಿದ್ದ ಬೇಕರಿ ಐಟಮ್ಮು ಸಹಿತ ಇನ್ನಿತರ ಹಣ್ಣು ಹಂಪಲು ತಿಂಡಿ ತಿನಿಸುಗಳು ಸಂಪೂರ್ಣ ಹಾಳಾಗಿ ನಷ್ಟ ಅನುಭವಿಸಿದ ವ್ಯಾಪಾರಸ್ಥರು, ಕೆಲವು ತಿಂಗಳ ವನವಾಸ ಅನುಭವಿಸಿ ಇದೀಗ ಲಾಕ್‌ಡೌನ್ ಭಾಗಶ: ಹಿಂತೆಗೆದು ಕೊಂಡಿದ್ದರಿಂದ ಮತ್ತೆ ಸಾಲಸೋಲ ಮಾಡಿ ಅಂಗಡಿಯಲ್ಲಿ ಸಾಮಾನುಗಳನ್ನು ಹಾಕಿಸಿಕೊಂಡರೂ ಗಿರಾಕಿಗಳ ಸುಳಿವೇ ಇಲ್ಲದೆ ಮತ್ತೇ ಆತಂಕಿತರಾಗಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆಯಲ್ಲಿ ಒಂದೇ ಸಮನೆ ಏರುತ್ತಿರುವ ಕರೋನಾ ಪಾಸಿಟಿವ್ ಪ್ರಕರಣಗಳಿಂದಾಗಿ ಸಾರ್ವಜನಿಕರ ಓಡಾಟ ವಿರಳವಾಗಿದೆ ಎಂದು ಹೇಳಲಾಗುತ್ತಿದ್ದರೂ ವಿಶೇಷ ಎಂದರೆ ಹೊಸ ಬಸ್ ನಿಲ್ದಾಣ ಹೊರತು ಪಡಿಸಿ ನಗರದ ಇತರೆಡೆಗಳಲ್ಲಿ ಸಾರ್ವಜನಿಕರ ಸಂಚಾರ ಸಹಜವಾಗಿದ್ದು, ವ್ಯಾಪಾರ ವಹಿವಾಟುಗಳು ಕೂಡಾ ತಕ್ಕ ಮಟ್ಟಿಗೆ ಎಂಬಂತೆ ನಡೆಯುತಲಿದೆ. ಆದರೆ ಹೊಸ ಬಸ್ಸು ನಿಲ್ದಾಣ ಮಾತ್ರ ಈಗಿನ್ನೂ ಲಾಕ್ ಡೌನ್ ಮನಸ್ಥಿತಿಯಿಂದ ಹೊರ ಬಂದಿಲ್ಲ. ಇದರ ನೇರ ಪರಿಣಾಮವು ನಿಲ್ದಾಣದೊಳಕ್ಕೆ ಪುರಸಭೆಯ ವಾಣಿಜ್ಯ ಮಳಿಗೆಗೆಗಳನ್ನು ಏಲಂ ಗೆ ಪಡೆದುಕೊಂಡಿರುವ ವ್ಯಾಪಾರಸ್ಥರನ್ನು ಕಾಡುತ್ತಿದ್ದು, ಅಂಗಡಿ ಬಾಡಿಗೆ ಸಲ್ಲಿಸುವುದು ಬಿಡಿ, ತಮ್ಮ ದೈನಿಂದಿನ ಖರ್ಚುಗಳಿಗಾಗಿ ಪಡಿ ಪಾಟಲು ಪಡುವಂತಾಗಿದೆ.

ಈ ಬಗ್ಗೆ ತಮ್ಮ ಆತಂಕವನ್ನು ತೋಡಿಕೊಂಡಿರುವ ಬಡ ವ್ಯಾಪಾರಸ್ಥರು ಕಡೇ ಪಕ್ಷ ಲಾಕ್ ಡೌನ್ ಸಮಯದ ಅಂಗಡಿ ಬಾಡಿಗೆಯನ್ನಾದರೂ ಮನ್ನಾ ಮಾಡುವಂತೆ ಅಗ್ರಹಿಸಿದ್ದಾರೆ.

Comments are closed.