ಕರಾವಳಿ

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಇನ್ನೂ ತಲುಪದ ‘ಅರಿವು’ ಸಾಲ : ಮುಖ್ಯಮಂತ್ರಿಗಳಿಗೆ ದೂರು

Pinterest LinkedIn Tumblr

ಮಂಗಳೂರು : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು ರಾಜ್ಯದ ಅಲ್ಪಸಂಖ್ಯಾತ (ಮುಸ್ಲಿಮ್, ಕ್ರೈಸ್ತ, ಬುದ್ಧ, ಜೈನ, ಸಿಖ್ ಮತ್ತು ಪಾರ್ಸಿ) ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ‘ಅರಿವು’ ಶೈಕ್ಷಣಿಕ ಸಾಲ ಯೋಜನೆಯನ್ನು ಜಾರಿಗೆ ತಂದಿದೆ.

ಕೋರ್ಸು ಮುಗಿದು ಅಥವಾ ಉದ್ಯೋಗ ಪಡೆದು ಒಂದು ವರ್ಷದ ಬಳಿಕ, ತಿಂಗಳ ಕಂತಿನ ರೂಪದಲ್ಲಿ ನಿಗಮಕ್ಕೆ ಮರು ಪಾವತಿ ಮಾಡುವ ಯೋಜನೆಯಿದು. ಈ ಯೋಜನೆಯಿಂದಾಗಿ ರಾಜ್ಯದ ಸಾವಿರಾರು ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಸಿಗುವಂತಾಗಿದೆ ಎಂಬುದು ವಾಸ್ತವ.

ಆದರೆ, 2019-20 ಸಾಲಿನ ಅರಿವು ಸಾಲದ ಮೊತ್ತ ಇನ್ನೂ ವಿದ್ಯಾರ್ಥಿಗಳು ಕಲಿಯುವ ಕಾಲೇಜಿನ ಖಾತೆಗೆ ಜಮಾ ಆಗದಿರುವುದು ರಾಜ್ಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತವರ ಪಾಲಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೋವಿಡ್-19ರ ಲಾಕ್ ಡೌನ್ ನಿಂದಾಗಿ ಕಂಗಾಲಾಗಿರುವ ಸಮುದಾಯದ ಬಡಜನರು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಖ್ಯಮಂತ್ರಿಯಾಗಿದ್ದಾಗಲೆಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳನ್ನು ನೀಡಿ, ಪ್ರೋತ್ಸಾಹಿಸುತ್ತಾ ಬಂದಿರುವ ಬಿ.ಎಸ್. ಯಡಿಯೂರಪ್ಪ ಅತಿ ಶೀಘ್ರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಸಾಲದ ಮೊತ್ತವನ್ನು ಅವರ ಕಾಲೇಜಿನ ಬ್ಯಾಂಕ್ ಖಾತೆಗೆ ಜಮಾ ಆಗಲು ಬೇಕಾದ ತುರ್ತು ಕ್ರಮ ಕೈಗೊಂಡು ಸಹಕರಿಸುವಂತೆ ಮಂಗಳೂರಿನ ಕರಿಯರ್ ಗೈಡೆನ್ಸ್ ಆಂಡ್ ಇನ್ಫೊರ್ಮೇಶನ್ ಸೆಂಟರ್ ನ ಅಧ್ಯಕ್ಷ ಉಮರ್ ಯು.ಹೆಚ್. ಮನವಿ ಮಾಡಿದ್ದಾರೆ.

ಈ ಹಿಂದೆ ನಿಗದಿತ ಸಮಯಕ್ಕೆ ತಲಪುತ್ತಿದ್ದ ಅರಿವು ಸಾಲದ ಮೊತ್ತ ಈ ವರ್ಷ ನಿಗಮಕ್ಕೆ ಹೊಸ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರ ಸ್ವೀಕರಿಸಿದ ಮೇಲೆ ವಿಳಂಬವಾಗುತ್ತಿದೆ. ಮೊದಲ ವರ್ಷ ಸಾಲ ಪಡೆದ ವಿದ್ಯಾರ್ಥಿ ಗಳು ಎರಡನೇ ವರ್ಷದ ಕಲಿಕೆಯ ಸಾಲಕ್ಕೆ ಅರ್ಜಿ ಸಲ್ಲಿಸಬೇಕಾದರೆ ಪಡೆದಿರುವ ಸಾಲದ ಶೇ.12 ಮಾರ್ಜಿನ್ ಮೊತ್ತ (ಅಸಲು ಮತ್ತು ಇತರ ಶುಲ್ಕ)ವನ್ನು ನಿಗಮಕ್ಕೆ ಮರು ಪಾವತಿ ಮಾಡಬೇಕಾಗಿದರುವುದು ನಿಯಮ. ಹೊಸ ನಿರ್ದೇಶಕರು ಈ ನಿಯಮವನ್ನು ತಿದ್ದಿ, ಎರಡನೇ ಅಥವಾ ಮೂರನೇ ವರ್ಷಕ್ಕೆ ಸಾಲ ನವೀಕರಣ ಅರ್ಜಿ ಸಲ್ಲಿಸಬೇಕಾದರೆ ಎರಡು ವರ್ಷಗಳ ಮಾರ್ಜಿನ್ ಮೊತ್ತವನ್ನು ನಿಗಮಕ್ಕೆ ಪಾವತಿಸಬೇಕೆಂಬ ಹೊಸ ನಿಯಮವೊಂದನ್ನು ಈ ವರ್ಷ ಜಾರಿಗೆ ತಂದಿರುತ್ತಾರೆ.

ಈ ನಿಯಮವನ್ನು ವಿದ್ಯಾರ್ಥಿಗಳ ಪಾಲಕರು ಮೊದಲು ತೀವ್ರವಾಗಿ ವಿರೋಧಿಸಿದರೂ. ಸಾಲ ಪಡೆಯಲೇ ಬೇಕಾದ ಅನಿವಾರ್ಯತೆಯಿಂದ ಎರಡು ವರ್ಷಗಳ ಮೊತ್ತವನ್ನು ನಿಗಮಕ್ಕೆ ಪಾವತಿ ಮಾಡಿರುತ್ತಾರೆ. ಆದರೂ, ಈ ತನಕ ಅರಿವು ಸಾಲದ ಮೊತ್ತವನ್ನು ಅರ್ಹ ವಿದ್ಯಾರ್ಥಿಗಳು ಕಲಿಯುವ ಕಾಲೇಜಿನ ಖಾತೆಗೆ ನಿಗಮವು ಜಮಾ ಮಾಡಿಲ್ಲ. ಈ ಮೂಲಕ ನಿಗಮವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಗಾಲು ಹಾಕಿದಂತಾಗಿದೆ. ಎರಡು ವರ್ಷಗಳ ಮಾರ್ಜಿನ್ ಮೊತ್ತ ಪಡೆದೂ ಸಾಲ ಕೊಡುತ್ತಿಲ್ಲವಲ್ಲಾ ಎಂದು ನಿರ್ದೇಶಕರಲ್ಲಿ ಪ್ರಶ್ನಿಸಿದರೆ ‘ಫಂಡ್ ಇಲ್ಲ’ ಎಂಬ ಹಾರಿಕೆಯ ಉತ್ತರ ಸಿಗುತ್ತಿದೆ.

ಸರಕಾರದ ಅನುದಾನದ ಮೊತ್ತಗಳು ದೇವರಾಜ ಅರಸು ನಿಗಮ ಹಾಗೂ ಪ.ಜಾತಿ ಮತ್ತು ಪ.ಪಂಗಡ ನಿಗಮಗಳಲ್ಲಿ ನೂರು ಶೇಕಡಾ ಬಳಕೆಯಾಗಿದ್ದರೂ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅನುದಾನದಲ್ಲಿ ಸುಮಾರು ಶೇ. 40ರಷ್ಟು ಮೊತ್ತ ಬಳಕೆಯಾಗದೆ ಸರಕಾರಕ್ಕೆ ವಾಪಾಸು ಹೋಗಿದೆ. ಇದಕ್ಕೆ ಹೊಸ ನಿರ್ದೇಶಕರೇ ಕಾರಣ ಎಂಬ ಆರೋಪವೂ ಕೇಳಿ ಬರುತ್ತಿದೆ.

ಮೇಲಿನ ದೂರು ಮತ್ತು ಆರೋಪಗಳ ಕುರಿತಂತೆ ತನಿಖೆಗೆ ಆದೇಶ ನೀಡಬೇಕೆಂದೂ ಉಮರ್ ಯು.ಹೆಚ್. ಮನವಿಯಲ್ಲಿ ಮುಖ್ಯಮಂತ್ರಿಯವರನ್ನು ವಿನಂತಿಸಿದ್ದಾರೆ.

ಮನವಿಯ ಯಥಾಪ್ರತಿಗಳನ್ನು ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವರು, ಕರ್ನಾಟಕ ಸರಕಾರ; ಪ್ರಧಾನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ; ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಕರ್ನಾಟಕ ಸರಕಾರ ಹಾಗೂ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ರವರಿಗೂ ನೀಡಲಾಗಿದೆ.

Comments are closed.