ಕರಾವಳಿ

ಹೆಣ್ಣು ಮಕ್ಕಳು ಪ್ರಾರಂಭಿಕ ಹಂತದ ಋತುಸ್ರಾವದ ವೇಳೆ ಗೊಂದಲಕ್ಕೆ ಒಳಗಾಗಬಾರದು : ಸಂಧ್ಯಾ

Pinterest LinkedIn Tumblr

ಮಂಗಳೂರು : ಋತುಸ್ರಾವ ಜಾಗೃತಿ ಸಪ್ತಾಹದ ಅಂಗವಾಗಿ ಋತುಸ್ರಾವ ನೈರ್ಮಲ್ಯ ದಿನಾಚರಣೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಂಧ್ಯಾ ಮಾತನಾಡಿ, ಹೆಣ್ಣು ಮಕ್ಕಳು ಪ್ರಾರಂಭಿಕ ಹಂತದ ಋತುಸ್ರಾವದ ವೇಳೆ ಯಾವುದೇ ಗೊಂದಲಕ್ಕೆ ಒಳಗಾಗಬಾರದು. ದೈಹಿಕವಾಗಿ ಕಾಣಿಸಿಕೊಳ್ಳುವ ಬದಲಾವಣೆಗಳು, ಆಯಾಸ ಮೊದಲಾದವುಗಳು ಸಹಜ ಪ್ರಕ್ರಿಯೆಗಳಾಗಿದೆ. ಮಾನಸಿಕ ಗೊಂದಲ, ದ್ವಂದ ನಿಲುವುಗಳಿಂದ ಖಿನ್ನತೆ ಕಾಡುವ ಸಾಧ್ಯತೆ ಇದೆ.

ದೇಹದಲ್ಲಿ ಪ್ರತಿರೋಧ ಶಕ್ತಿ ಕಡಿಮೆಯಾಗಿ ಸೋಂಕು ತಗಲುವ ಸಂಭವ ಜಾಸ್ತಿ ಇದೆ. ಇವುಗಳ ಕುರಿತಾಗಿ ನಾವು ಹೆಚ್ಚು ತಿಳಿದುಕೊಂಡು ನಮ್ಮ ಮಕ್ಕಳಿಗೂ ಈ ಬಗ್ಗೆ ತಿಳಿಸಿಕೊಡುವ ಸಲುವಾಗಿ ಈ ಸಪ್ತಾಹವನ್ನು ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್ ಘಟಕದ ಜಿಲ್ಲಾ ಸಂಯೋಜಕರಾದ ಮಂಜುಳಾ ಜಿ. ಮಾತನಾಡಿ, ಋತುಸ್ರಾವ ಪ್ರಕ್ರಿಯೆ ನೈಸರ್ಗಿಕವಾದ ಪ್ರಕ್ರಿಯೆಯೆ ಹೊರತು ಖಾಯಿಲೆ ಅಲ್ಲ. ಹೆಣ್ಣು ಮಕ್ಕಳಲ್ಲಿ ಆತ್ಮ ವಿಶ್ವಾಸ, ಆತ್ಮ ಗೌರವ ಹೆಚ್ಚಿಸುವುವದು, ಸಾಮಾಜಿಕ ಕಟ್ಟುಪಾಡುಗಳ ಬಗ್ಗೆ ಜಾಗೃತಿ ಮೂಡಿಸಿ ಆ ಮೂಲಕ ಸಾರ್ವಜನಿಕ ಮನಸ್ಥಿತಿಯಲ್ಲಿ ಬದಲಾವಣೆ ತರುವುದು ಅತೀ ಅಗತ್ಯ.

ಈ ವೇಳೆ ಸ್ವಚ್ಛತೆ ಮುಖ್ಯ. ಒಳ ಉಡುಪು ಶುಷ್ಕ ಹಾಗೂ ಶುಚಿಯಾಗಿರಲಿ. ಈ ಸಮಯದಲ್ಲಿ ಹತ್ತಿಯ ಉಡುಪು ಧರಿಸಬೇಕು. ಈ ಅವಧಿಯಲ್ಲಿ ಲಘು ಆಹಾರವನ್ನು ಸೇವಿಸಿ ಹೆಚ್ಚು ಬಿಸಿ ನೀರು ಕುಡಿಯಿರಿ. ಹೆಸರು ಕಾಳು ಮೊಳಕೆ ಭರಿಸಿ ತಿನ್ನಬಹುದು. ನುಗ್ಗೆ ಸೊಪ್ಪು ಮೊದಲಾದ ಸೊಪ್ಪು ತರಕಾರಿ ತಿಂದರೆ ನಮ್ಮ ದೇಹದ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದರು.

ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇ 28 ರಿಂದ ಋತುಸ್ರಾವ ದಿನವನ್ನು ರಾಜ್ಯದಾದ್ಯಂತ ಆಚರಿಸುತ್ತಿದ್ದು ಈ ಸಲುವಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಪ್ತಾಹ ಜೂನ್ 3 ರವರೆಗೆ ರಾಜ್ಯಾದಾದ್ಯಂತ ನಡೆಯಲಿದೆ.

ಸಾಮಾನ್ಯವಾಗಿ ಋತುಚಕ್ರವನ್ನು 28 ದಿನವೆಂದು ಪರಿಗಣಿಸಲಾಗುತ್ತಿದೆ. ಹೀಗಾಗಿ ದಿನಾಚರಣೆ ವೇಳೆ 23 ಬಿಳಿ ಮಣಿ, 5 ಕೆಂಪುಮಣಿ ಗಳನ್ನೊಳಗೊಂಡ ಬ್ರಾಸ್‍ಲೆಟ್ ಧರಿಸುವ ಮೂಲಕ ಋತುಚಕ್ರಕ್ಕಿರುವ ಕಳಂಕ ದೂರ ಮಾಡುವ ಸಲುವಾಗಿ ಋತು ಚಕ್ರ ಸ್ವಚ್ಚತೆ ಸಪ್ತಾಹ ಆಚರಿಸಲು ಇಲಾಖೆ ಸೂಚಿಸಿದೆ.

ಕಾರ್ಯಕ್ರಮದ ವೇಳೆ ಭಾಗವಹಿಸಿದ ಜಿಲ್ಲಾ ಪಂಚಾಯಿತಿಯ ಸಿಬ್ಬಂದಿಗಳಿಗೆ 23 ಬಿಳಿ ಮಣಿ ಹಾಗೂ 5 ಕೆಂಪುಮಣಿಗಳಿರುವ ಬ್ರಾಸ್‍ಲೆಟ್ ಹಾಗೂ ಬಲೂನುಗಳನ್ನು ನೀಡಿ ಜಾಗೃತಿ ಮೂಡಿಸಲಾಯಿತು. ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಯಾರಿಸಿದ ಋತುಸ್ರಾವದ ಮಹತ್ವ ಹಾಗೂ ಅರಿವನ್ನು ತಿಳಿಸಿಕೊಡುವ ಸಾಕ್ಷ್ಯಚಿತ್ರವನ್ನು ತೋರಿಸಲಾಯಿತು.

ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕ ನವೀನ್ ಕಾರ್ಯಕ್ರಮ ನಿರ್ವಹಿಸಿದರು. ಐಇಸಿ ಸಮಾಲೋಚಕ ಡೊಂಬಯ್ಯ ಇಡ್ಕಿದು ವಂದಿಸಿದರು.

Comments are closed.