ಕರಾವಳಿ

ನಾಗುರಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಅವ್ಯವಹಾರ : ಪರಿಶೀಲನೆಗೆ ಪರಿವೀಕ್ಷಣಾಧಿಕಾರಿ ನೇಮಕ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಮೇ.31: ನಾಗುರಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆದಿರುವ ಮೋಸ, ವಂಚನೆ ಹಾಗೂ ದುರಾಡಳಿತದ ಬಗ್ಗೆ ಕಾಯ್ದೆ ರೀತ್ಯಾ ಪರಿವೀಕ್ಷಣೆ ಮಾಡುವ ಕುರಿತಂತೆ ದಕ ಜಿಲ್ಲಾ
ಸಹಕಾರ ಸಂಘಗಳ ಉಪ ನಿಬಂಧಕರು ಮಂಗಳೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಪರಿವೀಕ್ಷಣಾಧಿಕಾರಿಯಾಗಿ ನೇಮಿಸಿ ವರದಿ ಪಡೆಯಲು ನಿರ್ದೇಶಿಸಿದೆ.

ಸಂಘದ ಅಡ್ಯಾರು ಶಾಖಾ ವ್ಯವಸ್ಥಾಪಕರು ಒಟ್ಟು ರೂ.19.30 ಲಕ್ಷಗಳ ವ್ಯವಹಾರ ಸರಿಯಾಗಿ ನಮೂದಿಸದೇ ಕರ್ತವ್ಯ ಲೋಪವೆಸಗಿರುವ ಬಗ್ಗೆ, ಸಂಘದ ಸಿಬ್ಬಂದಿಗಳಿಗೆ ಸಾಲ ಮಂಜೂರು ಮಾಡುವಾಗ ಸಿಬ್ಬಂದಿ ಸೇವಾ ನಿಯಮವಾಳಿಯನ್ನು ಮೀರಿ ಅಧಿಕ ಸಾಲ ನೀಡಿರುವುದು, ನಿವೃತ್ತ ನೌಕರನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿ ನಿಬಂಧಕರ ಸುತ್ತೋಲೆ 265ನ್ನುಉಲ್ಲಂಘನೆ ಮಾಡಿರುವ ಬಗ್ಗೆ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ17(4) ಉಲ್ಲಂಘಿಸಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿರುವ ಬಗ್ಗೆ ಹಾಗೂ ಇನ್ನಿತರ ಅವ್ಯವಹಾರಗಳ ಬಗ್ಗೆ ದೂರುಗಳು ಬಂದ ಹಿನ್ನೆ ಲೆಯಲ್ಲಿ ತನಿಖೆಯನ್ನು ಕೈಗೊಂಡಾಗ ಮೇಲೆ ಹೇಳಿದ ವಿಷಯಗಳು ಮೇಲ್ನೋಟಕ್ಕೆ ಸಾಬೀತಾದ ಕಾರಣ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 65ರ ಪ್ರಕಾರ ಸಂಪೂರ್ಣ ತನಿಖೆಗಾಗಿ ನಿರ್ದೇಶಿಸಿರುವುದಾಗಿದೆ .

ನಾಗುರಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಜಯಪ್ರಸಾದ್ ಆಳ್ವ, ಅಶೋಕ್ ಕುಮಾರ್ ಅಡ್ಯಂತಾಯ, ಆ್ಯಂಟನಿ ಮ್ಯಾಕ್ಸಿಂ ಡಿಸೋಜ ಮತ್ತು ರಾಮ್ ಗಣೇಶ್’ರವರುಗಳು ಬೆಂಗಳೂರಿನ ಸಹಕಾರ ಸಂಘದ ಕೇಂದ್ರ ಕಚೇರಿಯ ಸಹಕಾರ ಸಂಘಗಳ ಅಪರ ನಿಬಂಧಕರಲ್ಲಿ ಪತ್ರದಲ್ಲಿ ಕೋರಿದ್ದರು.

Comments are closed.