ಕರಾವಳಿ

ದುಬಾಯಿಂದ ಮಂಗಳೂರಿಗೆ ಬರಲಿರುವ ಎರಡನೇ ವಿಮಾನದ ಸಮಯ ಬದಲಾವಣೆ

Pinterest LinkedIn Tumblr

 

ಮಂಗಳೂರು, ಮೇ.18: ವಿದೇಶದಲ್ಲಿರುವ ಭಾರತೀಯರನ್ನು ಮಂಗಳೂರಿಗೆ ಕರೆತರಲು ಹೊರಟ ಎರಡನೇ ವಿಮಾನ ದುಬಾಯಿಯಿಂದ ಇಂದು ಸಂಜೆ 7:45ಕ್ಕೆ ಮಂಗಳೂರಿಗೆ ಆಗಮಿಸಲಿದೆ.

ಲಾಕ್‌ಡೌನ್‌ನಿಂದಾಗಿ ದುಬಾೖಯಲ್ಲಿ ಸಿಲುಕಿ ಕೊಂಡಿರುವ 35 ಗರ್ಭಿಣಿಯರ ಸಹಿತ 173 ಮಂದಿ ಪ್ರಯಾಣಿಕರು ಕೇಂದ್ರ ಸರಕಾರದ “ವಂದೇ ಭಾರತ’ ಕಾರ್ಯಾಚರಣೆಯಂತೆ ದುಬಾೖಯಿಂದ ಎರಡನೇ ವಿಮಾನದಲ್ಲಿ ಮೇ 18ರಂದು ಸಂಜೆ 6.30ಕ್ಕೆ ಮಂಗಳೂರಿಗೆ ಬರಲಿದ್ದಾರೆ ಎಂದು ಪ್ರಕಟಿಸಲಾಗಿತ್ತು.

ಆದರೆ ಇದೀಗ ಕಾರಣಂತರಗಳಿಂದ ದುಬಾಯಿಂದ ಮಂಗಳೂರಿಗೆ ಬರಲಿರುವ ಎರಡನೇ ವಿಮಾನ ವಿಳಂಬವಾಗಿ ಆಗಮಿಸಲಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದ್ದು, ವಿಮಾನ ಇಂದು ಸಂಜೆ 7:45ಕ್ಕೆ ಮಂಗಳೂರಿಗೆ ಆಗಮಿಸಲಿದೆ ಎಂದು ತಿಳಿಸಿದೆ..

ಇದರಲ್ಲಿ ಬರುವ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆ ನಡೆಸಿ, ನಂತರ ಆಸ್ಪತ್ರೆ ಅಥವಾ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಜಿಲ್ಲಾಡಳಿತವೇ ವಾಹನದ ಮೂಲಕ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ. ವಿದೇಶದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಹಾಗೂ ವ್ಯವಸ್ಥೆಗಳ ಪರಿಶೀಲನೆಗಾಗಿ ನಿಲ್ದಾಣದಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕ್ವಾರಂಟೈನ್‌ ಕೇಂದ್ರಗಳಿಗೆ ಕರೆದೊಯ್ಯಲು ಬಸ್‌ ವ್ಯವಸ್ಥೆ ಮಾಡಲಾಗಿದೆ.

ಹಣ ಪಾವತಿಸುವ ಷರತ್ತಿಗೊಳಪಟ್ಟು ಹೊಟೇಲುಗಳಲ್ಲಿ ಕ್ವಾರಂಟೈನ್‌ ಆಗಲು ಒಪ್ಪಿಗೆ ಪತ್ರ (ಅಂಡರ್‌ಟೇಕಿಂಗ್‌) ನೀಡಿರುವವರಿಗಾಗಿ ನಗರದಲ್ಲಿ 10 ಹೊಟೇಲ್ ‌ಗಳನ್ನು ಜಿಲ್ಲಾಡಳಿತ ಕಾದಿರಿಸಿದೆ. ದಿನಕ್ಕೆ ಕನಿಷ್ಠ 1,000 ರೂ.ಗಳಿಂದ ಗರಿಷ್ಠ 5,400 ರೂ. ವರೆಗಿನ ಬಾಡಿಗೆ ಇರುವ ಕೊಠಡಿಗಳು ಇರಲಿವೆ. ಅವುಗಳಿಗೆ ನೋಡೆಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೊಟೇಲ್‌ ವಾಸ್ತವ್ಯಕ್ಕೆ ಒಪ್ಪಿಗೆ ಇಲ್ಲದವರನ್ನು ಸರಕಾರಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ಗೆ ಅವಕಾಶ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಪ್ರಯಾಣಿಕರ ವಿವರಗಳನ್ನು ಮೊದಲೇ ಪಡೆದಿರುವ ಜಿಲ್ಲಾಡಳಿತ ಆನ್‌ಲೈನ್‌ ಮೂಲಕ ಹೊಟೇಲ್‌ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿದೆ. ಹಿಂದಿನ ಸಲದಂತೆ ಪ್ರಯಾಣಿಕರು ನಿಲ್ದಾಣದಲ್ಲಿ ಕಾಯಬೇಕಾದ ಪ್ರಮೇಯ ಕಡಿಮೆ. ವಿಮಾನ ಬಂದ ತತ್‌ಕ್ಷಣ ಎಲ್ಲ ಪ್ರಯಾಣಿಕರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ತಪಾಸಣೆಯ ಬಳಿಕ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಕಲ್ಪಿಸಲಾಗಿದೆ. ಏರ್‌ಪೋರ್ಟ್‌, ಏರ್‌ಲೈನ್ಸ್‌ ಹಾಗೂ ಭದ್ರತಾ ಪಡೆಯವರ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.

ಪ್ರಯಾಣಿಕರನ್ನು “ಎ’ ಮತ್ತು “ಬಿ’ ಎಂದು 2 ವಿಭಾಗ ಮಾಡಲಾಗಿದೆ. ಕೆಮ್ಮು, ಜ್ವರ, ನೆಗಡಿ ಇರುವವರು “ಎ’ ವಿಭಾಗದವರಾಗಿದ್ದು (ಇತರ ಜಿಲ್ಲೆಯವರು ಸೇರಿದಂತೆ) ಅವರನ್ನು ವೆನ್ಲಾಕ್‌ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆಯೊಂದಿಗೆ 14 ದಿನಗಳ ಕ್ವಾರಂಟೈನ್‌ ಮಾಡಲಾಗುತ್ತದೆ. ಯಾವುದೇ ರೋಗ ಲಕ್ಷಣ ಇಲ್ಲದವರು “ಬಿ’ ವಿಭಾಗದವರಾಗಿದ್ದು ಅಂಥವರನ್ನು ಆಯಾಯ ಜಿಲ್ಲೆಗೆ ಜಿಲ್ಲಾಡಳಿತದ ವತಿಯಿಂದಲೇ ಕಳುಹಿಸಿ 14 ದಿನಗಳ ಕ್ವಾರಂಟೈನ್‌ ಮಾಡಲಾಗುತ್ತದೆ.

ದುಬಾೖಯಿಂದ ಸೋಮವಾರ ವಿಮಾನ ಆಗಮಿಸಲಿದೆ. ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರ ವಿವರಗಳನ್ನು ಈಗಾಗಲೇ ಪಡೆದುಕೊಂಡಿದ್ದೇವೆ. ಕ್ವಾರಂಟೈನ್‌ಗೆ ಆನ್‌ಲೈನ್‌ ಬುಕ್ಕಿಂಗ್‌ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ವಿಮಾನ ನಿಲ್ದಾಣದಲ್ಲಿ ಮಾಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧ :

ವಿದೇಶದಲ್ಲಿರುವ ಭಾರತೀಯರು ಮಂಗಳೂರಿಗೆ ಆಗಮಿಸುತ್ತಿರುವ ಸಂದರ್ಭ ಅವರನ್ನು ವೈದ್ಯಕೀಯ ತಪಾಸಣೆ ನಡೆಸಿ, ನಂತರ ಆಸ್ಪತ್ರೆ ಅಥವಾ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಕಳಿಸಲು ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಥವಾ ಪ್ರಯಾಣಿಕರ ಕುಟುಂಬಸ್ಥರಿಗೆ ವಿಮಾನ ನಿಲ್ದಾಣಕ್ಕೆ ಬರಲು ಅವಕಾಶ ಇಲ್ಲ. ಅಲ್ಲದೇ, ಕ್ವಾರೆಂಟೈನ್ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments are closed.