ಕರಾವಳಿ

ಬುದ್ಧಿವಂತರ ಜಿಲ್ಲೆಯಲ್ಲಿ ಕ್ವಾರಂಟೈನ್‌ಗೆ ವಿರೋಧ : ಜಲತಾಣಗಳಲ್ಲಿ ವ್ಯಾಪಕ ಟೀಕೆ

Pinterest LinkedIn Tumblr

ವಿಶೇಷ ವರದಿ

ಕ್ವಾರಂಟೈನ್‌ಗೆ ವಿರೋಧ ಹಾಸ್ಯಸ್ಪದ : ಮಾಧ್ಯಮಗಳು ಜನರಲ್ಲಿ ಭಯ ಹುಟ್ಟಿಸುವ ಬದಲು ಜಾಗ್ರತೆ ಮೂಡಿಸಲಿ – ಜನಪ್ರತಿನಿಧಿಗಳು ಅರಿವು ಮೂಡಿಸಲಿ

ಮಂಗಳೂರು, ಮೇ.13 : ಕೊರೋನಾ ಲಾಕ್ ಡೌನ್ ಬಳಿಕ‌ ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 176 ಪ್ರಯಾಣಿಕರನ್ನು ಹೊತ್ತು ತಂದ ಮೊದಲ ವಿಮಾನ ಮಂಗಳವಾರ ರಾತ್ರಿ 10.10 ಕ್ಕೆ ಬಂದಿಳಿದಿದೆ.

ಆದರೆ ದುಬೈಯಿಂದ ಕರೆತಂದ ಮೊದಲ ವಿಮಾನದ ಅನಿವಾಸಿ ಕನ್ನಡಿಗ ಪ್ರಯಾಣಿಕರನ್ನು ಸೂಕ್ತ ವ್ಯವಸ್ಥೆ ಕಲ್ಪಿಸದೆ ಸತಾಯಿಸಿದ್ದಾರೆ ಎಂದು ಜಿಲ್ಲಾಡಳಿತದ ಕಾರ್ಯವೈಖರಿಯ ಬಗ್ಗೆ ಆರೋಪ ಕೇಳಿ ಬಂದ ಬೆನ್ನಲ್ಲೇ ಮಂಗಳೂರಿನ ಹಲವೆಡೆಗಳಲ್ಲಿ ಈ ಪ್ರಯಾಣಿಕರನ್ನು ಕ್ವಾರಂಟೈನ್ ನಲ್ಲಿಡುವ ಬಗ್ಗೆ ಕೆಲವರು ವಿರೋಧ ವ್ಯಕ್ತ ಪಡಿಸಿದ ಘಟನೆ ನಡೆದಿದ್ದು, ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಸುಮಾರು 176 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ಮಂಗಳವಾರ ರಾತ್ರಿ 10.10 ಕ್ಕೆ ಮಂಗಳೂರು ಏರ್ ಪೋಟ್೯ ನಲ್ಲಿ ಲ್ಯಾಂಡ್‌ ಆಯಿತು. ಪ್ರಯಾಣಿಕರಿಗೆ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು.

ಈ ವೇಳೆ ಜಿಲ್ಲಾಡಳಿತ ಹಾಗೂ ಏರ್ ಪೋರ್ಟ್ ಅಥೋರಿಟಿ ಸೂಕ್ತ ರೀತಿಯ ವ್ಯವಸ್ಥೆ ಕೈಗೊಳ್ಳದ ಹಿನ್ನೆಲೆಯಲ್ಲಿ ಹಲವಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ ಎಂಬ ದೂರು ಕೂಡ ಕೇಳಿ ಬಂದಿದೆ. ವಿಮಾನ ನಿಲ್ದಾಣದಲ್ಲಿ ಸರಿಯಾದ ವ್ಯವಸ್ಥೆ ಮಾಡದೇ ಇದ್ದ ಹಿನ್ನೆಲೆಯಲ್ಲಿ ಎಲ್ಲ ಪ್ರಯಾಣಿಕರ ವೈದ್ಯಕೀಯ ತಪಾಷಣೆ ಮಾಡಿ ಹೊರಡುವಾಗ ಮುಂಜಾನೆ 4 ಗಂಟೆಯಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಮಾತ್ರವಲ್ಲದೇ ಕೆಲವರಿಗೆ ಸೂಕ್ತ ರೀತಿಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡದೇ ಇರುವ ಬಗ್ಗೆ ಹಲವಾರು ಪ್ರಯಾಣಿಕರು ಮಾಧ್ಯಮಗಳ ಮುಂದೆ ಗೋಳಿಟ್ಟಿದ್ದಾರೆ. ಈ ಎಲ್ಲಾ ತೊಂದರೆಗಳ ಮಧ್ಯೆ ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ನಗರದ ಕೆಲವೆಡೆ ಸ್ಥಳೀಯರು ವಿದೇಶದಿಂದ ಬಂದ ನಮ್ಮವರಿಗೆ ಕ್ವಾರಂಟೈನ್ ಮಾಡುವದಕ್ಕೆ ವಿರೋಧ ವ್ಯಕ್ತ ಪಡಿಸಿರುವುದು, ಈ ಬಗ್ಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ.

ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ಗಲ್ಫ್ ಏರ್ಪೋರ್ಟ್ನಲ್ಲಿ ಕೊರೊನ ಟೆಸ್ಟ್ ಮಾಡಿದ ಮೇಲೆ ವಿಮಾನ ಹತ್ತಲು ಬೋರ್ಡಿಂಗ್ ಪಾಸ್ ಕೊಡುತ್ತಾರೆ. ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಮತ್ತೊಮ್ಮೆ ಮಂಗಳೂರು ಏರ್ಪೋರ್ಟ್ ನಲ್ಲೂ ಪರೀಕ್ಷೆ ನಡೆಸಲಾಗುತದೆ. ಈ ಸಂದರ್ಭ ಪ್ರಯಾಣಿಕರಲ್ಲಿ ಯಾರಿಗಾದರೂ ಜ್ವರ, ಕೆಮ್ಮು ಮುಂತಾದ ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ಮಾತ್ರ ಅವರನ್ನು ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ತಪಾಷಣೆಗೊಳಪಡಿಸುತ್ತಾರೆ.

ಯಾವೂದೇ ರೀತಿಯ ಅನಾರೋಗ್ಯದ ಲಕ್ಷಣಗಳು ಕಂಡು ಬರದ ಉಳಿದ ಯಾನಿಗಳನ್ನು ಮುಂಜಾಗ್ರತಾ ಕ್ರಮವಾಗಿ 14 ದಿನಗಳ ಕ್ವಾರಂಟೈನ್ ನಲ್ಲಿ ಇಡಲಾಗುವುದು. ಇವರಿಂದ ಯಾವೂದೇ ರೀತಿಯ ತೊಂದರೆಗಳು ಇರುವುದಿಲ್ಲ. ಆದರೂ ನಮ್ಮ ಬುದ್ದಿವಂತರ ಜಿಲ್ಲೆಯ ಜನತೆ ಭಯಪಟ್ಟು ಕ್ವಾರಂಟೈನ್ ಗೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣ ಮಾಧ್ಯಮಗಳು ಎಂಬ ಆರೋಪ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದೆ.

ಮಾಧ್ಯಮಗಳು ಈ ಬಗ್ಗೆ ಜನರಲ್ಲಿ ಭಯ ಹುಟ್ಟಿಸುವ ಬದಲು ಜಾಗ್ರತೆ ಮೂಡಿಸುವ ಕಾರ್ಯವನ್ನು ಮಾಡಬೇಕು. ಜೊತೆಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕೂಡ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಿದರೆ ನಗರದ ಜನತೆ ಈಗಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಖಂಡಿತವಾಗಿಯೂ ಸಹಕರಿಸುತ್ತಾರೆ ಎಂಬ ವಿಶ್ವಾಸ ಜಲತಾಣಗಳಲ್ಲಿ ವ್ಯಕ್ತವಾಗಿದೆ.

ವಿಶೇಷ ವರದಿ : ಸತೀಶ್ ಕಾಪಿಕಾಡ್

Comments are closed.