ಅಂತರಾಷ್ಟ್ರೀಯ

ಕೊರೊನಾ ಜಯಿಸಿದ ಸ್ಪೇನ್‌ನ 113 ವರ್ಷದ ಅಜ್ಜಿ

Pinterest LinkedIn Tumblr


ಮ್ಯಾಡ್ರಿಡ್: ಕೊರೊನಾ ವೈರಸ್ ಸೋಂಕು ಇಡೀ ವಿಶ್ವವನ್ನೇ ಆವರಿಸಿದೆ. ಅದರಲ್ಲೂ ಯುರೋಪ್‌ನಲ್ಲಿ ಅತಿ ಹೆಚ್ಚು ಸಂಕಷ್ಟವನ್ನು ಬೀರಿದೆ.

ಈ ಮಧ್ಯೆ ಶುಭದಾಯಕ ಸುದ್ದಿಯೊಂದರಲ್ಲಿ ಸ್ಪೇನ್‌ನ 113 ವರ್ಷದ ಮಹಿಳೆಯೊಬ್ಬರು ಮಹಾಮಾರಿ ಕೊರೊನಾ ವೈರಸ್ ಸೋಂಕು ಗೆದ್ದು ಬಂದಿದ್ದಾರೆ. ಮರಿಯಾ ಬ್ರಾನ್ಯಾಸ್ ಎಂಬವರೇ ಕೋವಿಡ್ ರೋಗ ಗೆದ್ದು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ವೈದ್ಯಲೋಕದ ಲೋಕದ ಮಹತ್ತರ ಸಾಧನೆಯಾಗಿದೆ. ಅಲ್ಲದೆ ಸ್ಪೇನ್‌ನಲ್ಲಿ ಕೋವಿಡ್ ಸೋಂಕು ಗೆದ್ದ ಅತಿ ಹಿರಿಯ ವ್ಯಕ್ತಿ ಅಥವಾ ಮಹಿಳೆ ಎಂಬ ಬಿರುದಿಗೂ ಪಾತ್ರವಾಗಿದ್ದಾರೆ. ಅಷ್ಟೇ ಯಾಕೆ ಸ್ಪೇನ್‌ನಲ್ಲಿ ಜೀವಿಸುತ್ತಿರುವ ಅತಿ ಹಿರಿಯ ವ್ಯಕ್ತಿ ಕೂಡಾ ಇವರಾಗಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕೊರೊನಾ ವೈರಸ್ ಸೋಂಕಿಗೆ ಹಿರಿಯ ವ್ಯಕ್ತಿಗಳು ಬೇಗನೇ ಬಲಿಯಾಗುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದರಿಂದ ವಯಸ್ಸಾದವರಲ್ಲಿ ಸಾವಿನ ಪ್ರಮಾಣ ಜಾಸ್ತಿಯಾಗುತ್ತಿದೆ.

ಈ ಎಲ್ಲದರ ನಡುವೆ 113 ವರ್ಷದ ಅಜ್ಜಿ ಕೊರೊನಾ ಗೆದ್ದು ಬರುವ ಮೂಲಕ ಇತರರಿಗೂ ಸ್ಪೂರ್ತಿ ತುಂಬಿದ್ದಾರೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಅಜ್ಜಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಅಲ್ಲದೆ ಉಸಿರಾಟದ ತೊಂದರೆಯು ಎದುರಾಗಿತ್ತು. ಇವರಿಗೆ ಸಿಟಿ ಆಫ್ ಓಲೋಟ್‌ನಲ್ಲಿ ಸಾಂಟಾ ಮರಿಯಾ ಡೆಲ್ ಟ್ಯುರಾ ಕೇರ್ ಹೋಮ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಅಜ್ಜಿ ಆರೋಗ್ಯ ಸುಧಾರಿಸಿದ್ದು, ಕಳೆದ ವೈದ್ಯಕೀಯ ಪರೀಕ್ಷೆಗಳೆಲ್ಲ ನೆಗೆಟಿವ್ ಆಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಮೂವರು ಮಕ್ಕಳ ತಾಯಿಯಾಗಿರುವ ಅಜ್ಜಿಯನ್ನು ಐಸೋಲೇಷನ್‌ನಲ್ಲಿರಿಸಿ ಚಿಕಿತ್ಸೆ ಒದಗಿಸಲಾಗಿತ್ತು. ಉಲ್ಲದೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದರು. ಇದೀಗ ನಗುಮುಖದಿಂದಲೇ ಪ್ರತಿಕ್ರಿಯೆ ನೀಡಿರುವ ಅಜ್ಜಿ, ಉತ್ತಮ ಆರೋಗ್ಯವೇ ದೀರ್ಘ ಆಯುಷ್ಯದ ರಹಸ್ಯವಾಗಿದೆ ಎಂದು ಹೇಳಿದ್ದಾರೆ.

1907ನೇ ಇಸವಿಯ ಮಾರ್ಚ್ 4ರಂದು ಅಜ್ಜಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಜನಿಸಿದ್ದರು. ಒಂದನೇ ಮಹಾಯುದ್ಧ ಕಾಲಘಟ್ಟದಲ್ಲಿ ಅವರು ಕುಟುಂಬ ಸಮೇತ ಸ್ಪೇನ್‌ಗೆ ಸ್ಥಳಾಂತರಗೊಂಡಿದ್ದರು. 1918-19ನೇ ಸಾಲಿನಲ್ಲಿ ಸ್ಪೇನ್‌ಗೆ ಆವರಿಸಿದ ಸ್ಪ್ಯಾನಿಶ್ ಫ್ಲ್ಯೂ ಹಾಗೂ 1936-39ರ ಸ್ಪೇನ್ ಸಿವಿಲ್ ವಾರ್ ಸಂದರ್ಭದಲ್ಲಿ ಬದುಕಿಳಿದ ಮಹಿಳೆ ಎಂದೆನಿಸಿದ್ದಾರೆ.

ಅಂದ ಹಾಗೆ ಕೊರೊನಾ ವೈರಸ್ ಸೋಂಕಿಗೆ ಸ್ಪೇನ್‌ನಲ್ಲಿ ಇದುವರೆಗೆ 27,000ಕ್ಕೂ ಹೆಚ್ಚು ಮಂದಿ ಸಾವಿಗೆ ಶರಣಾಗಿದ್ದಾರೆ.

Comments are closed.