ಕರಾವಳಿ

ಮಂಗಳೂರು: ಸುಳ್ಳು ಸುದ್ಧಿ ನಂಬಿ ಕಾಲ್ನಡಿಗೆಯಲ್ಲಿ ರೈಲು ನಿಲ್ದಾಣಕ್ಕೆ ಆಗಮಿಸಿದ 700ಕ್ಕೂ ಹೆಚ್ಚು ಕಾರ್ಮಿಕರು

Pinterest LinkedIn Tumblr

ಮಂಗಳೂರು, ಮೇ 8: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸುದ್ಧಿಯನ್ನು ನಂಬಿ ಉತ್ತರ ಭಾರತ ಮೂಲದ ನೂರಾರು ವಲಸೆ ಕಾರ್ಮಿಕರು ಶುಕ್ರವಾರ ಬೆಳಗ್ಗೆ ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

ರೈಲು ಸಂಚಾರ ಇನ್ನೂ ಆರಂಭಗೊಳ್ಳದಿದ್ದರೂ ಕಾರ್ಮಿಕರನ್ನು ಉಚಿತವಾಗಿ ರೈಲಿನ ಮೂಲಕ ಕಳುಹಿಸಲಾಗುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪರಿಣಾಮ ಸುಳ್ಳು ಸುದ್ದಿ ನಂಬಿ ಕೂಳೂರು, ಕೆಪಿಟಿ, ನಂತೂರು, ಸುರತ್ಕಲ್, ದೇರಬೈಲ್, ಬೈಕಂಪಾಡಿಯಿಂದ ಬಂದಿರುವ ಸುಮಾರು 700ಕ್ಕೂ ಹೆಚ್ಚು ಕಾರ್ಮಿಕರು ಕಾಲ್ನಾಡಿಗೆ ಮೂಲಕ ರೈಲು ನಿಲ್ದಾಣಕ್ಕೆ ಆಗಮಿಸಿ ತಮ್ಮೂರಾದ ರಾಜಸ್ಥಾನ, ಬಿಹಾರ, ಅಸ್ಸಾಂ, ಉತ್ತರಪ್ರದೇಶಗಳಿಗೆ ಕಳುಹಿಸುವಂತೆ ಪಟ್ಟು ಹಿಡಿದರು.

ಇವರನ್ನು ನಿಯಂತ್ರಿಸಲು ರೈಲ್ವೆ ಪೊಲೀಸರು ಹಾಗೂ ಪಾಂಡೇಶ್ವರ ಪೊಲೀಸರು ಹರಸಾಹಸ ಪಟ್ಟರು. ಈ ವೇಳೆ ಕಾರ್ಮಿಕರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ಪರಿಣಾಮ ಸ್ಥಳದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲೇ ಕುಳಿತು ಧರಣಿ ಆರಂಭಿಸಿರುವ ಕಾರ್ಮಿಕರು, ‘We want to go home’ ಪೋಸ್ಟರ್ ಹಿಡಿದು ಕುಳಿತಿರುವ ಕಾರ್ಮಿಕರು‌, ತಮ್ಮ ಊರುಗಳಿಗೆ ತೆರಳಲು ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು. ಕೆಲಸವೂ ಇಲ್ಲ, ಆದಾಯವೂ ಇಲ್ಲ, ನಮ್ಮನ್ನು ಊರಿಗೆ ಕಳುಹಿಸಿಕೊಡಿ. ಕಾರ್ಮಿಕರು ಪಟ್ಟು ಹಿಡಿದಿದರು.

ಸ್ಥಳಕ್ಕೆ ಆಗಮಿಸಿರುವ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಹಾಗೂ ರೈಲ್ವೆ ಅಧಿಕಾರಿಗಳು, ”ನಿಮಗೆ ಮನೆ ಬಾಡಿಗೆ ವಿಚಾರವಾಗಿ ತಕರಾರು ಇದ್ದರೆ ಸ್ಥಳೀಯ ಠಾಣೆಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು. ರೇಶನ್ ವ್ಯವಸ್ಥೆ ಕೂಡ ಮಾಡಲಾಗುವುದು. ಇಷ್ಟರವರೆಗೆ ತಾಳ್ಮೆ ವಹಿಸಿದ್ದೀರಿ. ಇನ್ನೂ ಕೆಲ ದಿನ ತಾಳ್ಮೆ ವಹಿಸಿ. ರಾಜ್ಯ ಸರಕಾರ ಇತರ ರಾಜ್ಯ ಸರಕಾರಗಳ ಜತೆ ಮಾತುಕತೆ ನಡೆಸಿ ನಿಮಗೆ ಊರಿಗೆ ತೆರಳಲು ವ್ಯವಸ್ಥೆ ಮಾಡಲಿದೆ” ಎಂದು ಕಾರ್ಮಿಕರ ಮನವೊಲಿಕೆಗೆ ಮುಂದಾದರೂ ಪಟ್ಟು ಬಿಡದ ವಲಸೆ ಕಾರ್ಮಿಕರು ಧರಣಿ ಕುಳಿತರು.

ವಲಸೆ ಕಾರ್ಮಿಕರ ಧರಣಿಯ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, 3 ದಿನಗಳೊಳಗೆ ನಿಮಗೆ ಊರಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿಯವರೆಗೆ ಸಂಯಮ ಕಾಯ್ದುಕೊಂಡು ಸದ್ಯ ನೀವು ವಾಸ್ತವ್ಯವಿರುವಲ್ಲಿಗೆ ತೆರಳಿ ಸಹಕರಿಸುವಂತೆ ಕಾರ್ಮಿಕರಲ್ಲಿ ಮನವಿ ಮಾಡಿದರು. ಬಳಿಕ 2 ದಿನಗಳೊಳಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ ಕಾರ್ಮಿಕರು ಧರಣಿ ಹಿಂಪಡೆದರು.

ಧರಣಿ ಹಿಂಪಡೆದ ಬಳಿಕ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸಿದ ಕಾರ್ಮಿಕರನ್ನು ಮತ್ತೆ ಅವರಿದ್ದಲ್ಲಿಗೆ ಕೆಎಸ್ಸಾರ್ಟಿಸಿ ಬಸ್ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಲಾಯಿತು.

Comments are closed.