ಕರಾವಳಿ

ಗ್ರಾಮ ಮಟ್ಟದಲ್ಲಿ ಕರೋನ ತೊಲಗಿಸಿ : ಪಂಚಾಯತ್ ಅಧ್ಯಕ್ಷರುಗಳಿಗೆ ಸಚಿವ ಕೋಟ ಸೂಚನೆ

Pinterest LinkedIn Tumblr

ಮಂಗಳೂರು ; ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ಆಯ್ದ 30 ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರತಿ ಗ್ರಾಮ ಪಂಚಾಯತ್ ಗಳ ಮಟ್ಟದಲ್ಲಿ ಪಂಚಾಯತ್ ಕಾರ್ಯಪಡೆ ಒಂದು ತಂಡವಾಗಿ, ಕರಾರುವಾಕ್ಕಾಗಿ ಕೆಲಸ ಮಾಡಿದ್ದಲ್ಲಿ ಕರೋನದ ಮೂಲೋಚ್ಚಾಟನೆ ಸಾಧ್ಯವಿದೆ.

ಈ ಹಿನ್ನೆಲೆಯಲ್ಲಿ ಮನೆ ಮನೆ ಸಂದರ್ಶಿಸುವ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಗಳ ಜೊತೆ, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸಿಬ್ಬಂದಿಗಳು ಹಾಗೂ ಪಿ.ಡಿ.ಒ ಅವರ ತಂಡ ಯೋಜನಾ ಬದ್ದವಾಗಿ ಕೆಲಸ ಮಾಡುವ ಅಗತ್ಯವಿದೆ . ಪ್ರತಿ ಗಾಮದ, ಪ್ರತಿ ವಾರ್ಡ್ ನಲ್ಲಿ ಮನೆ ಮನೆ ಭೇಟಿ ನೀಡುವ ಸಂದರ್ಭ, ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕುಟುಂಬದಲ್ಲಿರುವ ಪ್ರತಿ ವ್ಯಕ್ತಿಯನ್ನು ಗಮನಿಸಿ ಕರೋನದ ಚಹರೆಗಳಿಲ್ಲದಿರುವುದು ಖಚಿತ ಪಡಿಸಿ ಕೊಂಡು ಜಿಲ್ಲಾಡಳಿತಕ್ಕೆ ವರದಿ ನೀಡಬೇಕಾದ ಅಗತ್ಯವಿದೆ ಎಂದು ಸೂಚಿಸಿದರು.

ಬಹುತೇಕ ಎಲ್ಲಾ ಗ್ರಾಮಪಂಚಾಯತ್ ಗಳಲ್ಲೂ ಉದ್ಯೋಗ ಖಾತ್ರಿ ಆರಂಬಿಸಿದ ಕುರಿತು ಮಾಹಿತಿ ಪಡೆದ ಸಚಿವರು, ಪಡಿತರ ಹಂಚಿಕೆಯನ್ನು ಪಂಚಾಯತ್ ನ ಸಲಹೆ ಸೂಚನೆಗಳೊಂದಿಗೆ ವಿತರಿಸಿದಾಗ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯವಸ್ಥಿತವಾಗಿ ನಿರ್ವಹಿಸಲು ಸಾಧ್ಯವಿದೆ. ಕುಡಿಯುವ ನೀರು, ರಸ್ತೆ ಮುಂತಾದ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಪಂಚಾಯತ್ ಗಳು ಗಮನ ಹರಿಸಬೇಕೆಂದು ಸಲಹೆ ನೀಡಿದರು.

ಮಳೆಗಾಲ ಆರಂಭವಾಗುವ ಮುಂಬರುವ ದಿನಗಳಲ್ಲಿ ಡೆಂಗ್ಯು, ಮಲೇರಿಯಾ ಹಾಗೂ ಚಿಕನ್ ಗುನ್ಯದಂತಹ ಮುಂತಾದ ಮಾರಕ ಖಾಯಿಲೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುವ ಸಂಭವವಿದ್ದು, ಮುಂದಾಲೋಚನೆಯಿಂದ ಕಾರ್ಯವೆಸಗ ಬೇಕೆಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಸಮಕ್ಷಮದಲ್ಲಿ ಇಂದು ಎರಡನೇ ದಿನ ಗ್ರಾಮ ಪಂಚಾಯತ್ ಗಳ ವಿಡಿಯೋ ಸಂವಾದ ನಡೆಯುತ್ತಿದ್ದು, ಪಂಚಾಯತ್ ಅಧ್ಯಕ್ಷರುಗಳು ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಾಗ ಸಚಿವರು ಸಮಾಧಾನದಿಂದ ಉತ್ತರಿಸಿದರು.

ಮೇ 15ರ ನಂತರ ಪಂಚಾಯತ್ ಪ್ರತಿನಿಧಿಗಳ ಜವಾಬ್ದಾರಿ ಹೇಗೆ ಎಂಬ ತೂರಿ ಬಂದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೋಟ, ಪಂಚಾಯತ್ ಅವಧಿ ಮುಗಿದಾಗ, ಯಾವ ರೀತಿ ಈಗಿರುವ ಜನ ಪ್ರತಿನಿಧಿಗಳನ್ನು ಉಸ್ತುವಾರಿಯಾಗಿ ಮುಂದುವರೆಸಬೇಕೆಂಬ ಬೇಡಿಕೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.

ವಿಡಿಯೋ ಸಂವಾದದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ,‌ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶಲ್ವಮಣಿ, ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀ ರಾಮಚಂದ್ರ ಬಾಯರಿ, ಆಹಾರ ಮತ್ತು ನಾಗರಿಕ ಸರಬರಾಜು ಜೆ.ಡಿ, ಜಿಲ್ಲಾ ಪಂಚಾಯತ್ ಡಿ.ಎಸ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.