ಕರಾವಳಿ

ಹೊರ ರಾಜ್ಯಗಳಲ್ಲಿ ಇರುವ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭ : ಮುಖ್ಯಮಂತ್ರಿಗಳಿಂದ ಚಾಲನೆ

Pinterest LinkedIn Tumblr

ಮಂಗಳೂರು / ಬೆಂಗಳೂರು, ಎಪ್ರಿಲ್.28 : ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮನವಿಯ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಹೊರ ರಾಜ್ಯಗಳಲ್ಲಿ ಇರುವ ಕನ್ನಡಿಗರಿಗಾಗಿ ಸಹಾಯವಾಣಿಗೆ ಚಾಲನೆ ನೀಡಿದರು.

ಇಂದಿನಿಂದ ಕಾರ್ಯಾರಂಭ ಮಾಡುವ ಸಹಾಯವಾಣಿಯ ಸಂಖ್ಯೆ -080 22636800.

ಪ್ರಪಂಚದಾದ್ಯಂತ ಮಾರಕ ಸೋಂಕುರೋಗ ಕೋವಿಡ್-19 ಹರಡಿರುವ ಹಿನ್ನಲೆಯಲ್ಲಿ ದೇಶವ್ಯಾಪಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಕೆಲಸದ ನಿಮಿತ್ತ ಹೊರ ರಾಜ್ಯಗಳಿಗೆ ಹೋಗಿ ಸಿಲುಕಿರುವ ಕರ್ನಾಟಕ ಮೂಲದವರ ಸಮಸ್ಯೆಗಳನ್ನು ಆಲಿಸಲು ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆ ವತಿಯಿಂದ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಇಂದಿನಿಂದ ಕಾರ್ಯಾರಂಭಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.

ಬೆಂಗಳೂರಿನ ಡೈರಿ ವೃತ್ತದಲ್ಲಿರುವ ಕಲ್ಯಾಣ ಸುರಕ್ಷಾ ಭವನದಲ್ಲಿ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರದಲ್ಲಿ ಪ್ರತಿ ಪಾಳಿಯಲ್ಲಿ 50 ಜನರಂತೆ 3 ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ.

ಲಾಕ್ ಡೌನ್ ಸಮಸ್ಯೆಯಿಂದ ಪ್ರಯಾಣ ಮಾಡಲು ಸಾಧ್ಯವಾಗದ ಹೊರ ರಾಜ್ಯಗಳಲ್ಲಿ ಉಳಿದು ತೊಂದರೆಗೆ ಸಿಲುಕಿರುವ ಕಾರ್ಮಿಕರಿಗಾಗಿ ಹಾಗೂ ಆಹಾರ ಮತ್ತು ಇತರ ಮೂಲಭೂತ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲಿ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ದೂರು ಬಂದ ಕೂಡಲೇ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಸ್ಯೆ ಪರಿಹರಿಸಿ ಹೊರ ರಾಜ್ಯಗಳಲ್ಲಿ ಸಿಲುಕಿರುವವರ ಹಿತರಕ್ಷಣೆಗೆ ಕಾರ್ಯಪ್ರವೃತ್ತವಾಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

Comments are closed.