ಮಂಗಳೂರ/ ಬಂಟ್ವಾಳ, ಎಪ್ರಿಲ್. 26: ದ.ಕ. ಜಿಲ್ಲೆಯಲ್ಲಿ ಸತತ ಎರಡು ದಿನಗಳಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ದ.ಕ ಜಿಲ್ಲೆಯ ಬಂಟ್ವಾಳದ ಮತ್ತೊಬ್ಬ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿನ 47 ವರ್ಷ ಪ್ರಾಯದ ಮಹಿಳೆಗೆ ಕೋವಿಡ್ – 19 (ಕೊರೋನ) ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆಗೊಳಿಸಿದ ಬುಲೆಟ್‌ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19ಕ್ಕೇರಿದೆ.
ಇಂದು ಕೊರೋನ ದೃಢಪಟ್ಟ ನರಿಕೊಂಬು ಗ್ರಾಮದ ನಾಯಿಲದ ಮಹಿಳೆ ಮಂಗಳೂರು ಹೊರ ವಲಯದ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಗುರುವಾರ ಕೊರೋನ ಸೋಂಕಿನಿಂದ ಮೃತಪಟ್ಟ ಬಂಟ್ವಾಳ ಪೇಟೆಯ 75 ವರ್ಷ ಪ್ರಾಯದ ಮಹಿಳೆಯಿಂದ ಈ ಮಹಿಳೆಗೆ ಸೋಂಕು ಹರಡಿದೆ ಎಂದು ತಿಳಿಸಲಾಗಿದೆ.
ಗುರುವಾರ ಮೃತಪಟ್ಟ ಮಹಿಳೆ ಪಾರ್ಶ್ವವಾಯು (ಸ್ಟ್ರೋಕ್)ನಿಂದ ಮಂಗಳೂರು ಹೊರ ವಲಯದ ಅಡ್ಯಾರ್ ಕಣ್ಣೂರು ಸಮೀಪದ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಮಾ. 18ರಂದು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಮಹಿಳೆಯನ್ನು ಎ. 21ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಪರೀಕ್ಷೆಗೆ ಕಳುಹಿಸಿದ ಅವರ ಗಂಟಲ ದ್ರವ ಮಾದರಿಯ ವರದಿ ಕೂಡಾ ಪಾಸಿಟಿವ್ ಬಂದಿತ್ತು. ಎಪ್ರಿಲ್ 23ರಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಎಪ್ರಿಲ್ 23ರಂದು ಮೃತಪಟ್ಟ ಮಹಿಳೆಗೆ ಕೊರೋನ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸಹಿತ ಹಲವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಅಲ್ಲದೆ ಆಸ್ಪತ್ರೆ ಸಹಿತ ಸುತ್ತಲಿನ ಪ್ರದೇಶವನ್ನು ಸೀಲ್ ಮಾಡಲಾಗಿತ್ತು.
ಇಂದು ಇಡೀ ರಾಜ್ಯದಲ್ಲಿ ಒಂದೇ ಕೊರೋನ ಪ್ರಕರಣ ಪಾಸಿಟಿವ್ ಆಗಿದ್ದು ಅದು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯಾಗಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಆ ಪೈಕಿ 12 ಮಂದಿ ಗುಣಮುಖರಾಗಿದ್ದು 2 ಮಂದಿ ಮೃತಪಟ್ಟಿದ್ದಾರೆ. 5 ಮಂದಿ ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೋನ ಹಾಟ್‍ಸ್ಪಾಟ್ ಎಂದು ಗುರುತಿಸಿರುವ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 7 ಕೊರೋನ ಸೋಂಕು ಪಾಸಿಟಿವ್ ಆಗಿದ್ದು ಈ ಪೈಕಿ 2 ಮಂದಿ ಗುಣಮುಖರಾಗಿದ್ದಾರೆ. 2 ಮಂದಿ ಮೃತಪಟ್ಟಿದ್ದು 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.