ಕರಾವಳಿ

ಮೀನುಗಾರರ ಸಾಲಮನ್ನಾ ಹಣ ಬಿಡುಗಡೆ ಸ್ವಾಗತಾರ್ಹ: ಜಯಕರ್ನಾಟಕದ ಸತೀಶ್ ಪೂಜಾರಿ ಸಂತಸ

Pinterest LinkedIn Tumblr

ಉಡುಪಿ: ಕರಾವಳಿ ಭಾಗದ ಮೀನುಗಾರರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದೆ. ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಮೀನುಗಾರರ ಸಾಲಮನ್ನಾ ಯೋಜನೆಯ ಹಣವನ್ನು ಹಣಕಾಸು ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹೀಗಾಗಿ ರಾಜ್ಯದ 23,000 ಮೀನುಗಾರರ 60 ಕೋಟಿ ರೂಪಾಯಿ ಸಾಲ ಮನ್ನಾ ಆಗಲಿದೆ.

ಆದರೆ ಘೋಷಣೆಯಾಗಿ ಹಲವು ತಿಂಗಳುಗಳೇ ಕಳೆದರೂ ಕೂಡ ಮೀನುಗಾರರ ಸಾಲಮನ್ನಾದ ಹಣ ಬಿಡುಗಡೆಯಾಗಿರಲಿಲ್ಲ. ಅಲ್ಲದೇ ಬ್ಯಾಂಕುಗಳು ಕೂಡ ಮೀನುಗಾರರಿಂದ ಬಲವಂತವಾಗಿಯೇ ಸಾಲ ವಸೂಲಾತಿಯನ್ನು ಮಾಡಿಕೊಂಡಿದ್ದವು. ಇದರ ಬಗ್ಗೆ ಜಯಕರ್ನಾಟಕ ಸಂಘಟನೆ ಬಜೆಟನಲ್ಲಿ ಮೀನುಗಾರರ ಸಾಲಮನ್ನಾದ ಬಗ್ಗೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿತ್ತು ಅವರು ಯಾರೂ ಕೂಡ ಸಾಲ ಮರುಪಾವತಿ ಮಾಡುವುದು ಬೇಡ ಅನ್ನುವ ಹೇಳಿಕೆ ನೀಡಿದ್ದರು. ಅಲ್ಲದೇ 10 ದಿನಗಳ ಒಳಗಾಗಿ ಸಾಲಮನ್ನಾ ಯೋಜನೆಯ ಹಣ ಬಿಡುಗಡೆ ಮಾಡುವುದಾಗಿಯೂ ಭರವಸೆ ನೀಡಿದ್ದರು.

ಇದೀಗ ರಾಜ್ಯ ಹಣಕಾಸು ಇಲಾಖೆ ಅಧಿಕೃತವಾಗಿ 23,000 ಮೀನುಗಾರರ ಸಾಲಮನ್ನಾ ಬಾಪ್ತು 60 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದ ಮೀನುಗಾರರಿಗೆ ಇದೀಗ ಸಾಲಮನ್ನಾ ಹಣ ಬಿಡುಗಡೆಯಾಗಿರೋದು ಖುಷಿಯನ್ನು ನೀಡಿದೆ‌ ಎಂದು ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ತಿಳಿಸಿದ್ದಾರೆ .

ಈ ವಿಚಾರವಾಗಿ ಸಾಕಷ್ಟು ಮುತುವರ್ಜಿ ವಹಿಸಿದ ಮುಖ್ಯಮಂತ್ರಿಗಳು, ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಧನ್ಯವಾದ ತಿಳಿಸಿದರು.

Comments are closed.