ಕರಾವಳಿ

ಕುಂದಾಪುರ ನಗರದೊಳಕ್ಕೆ ಎಂಟ್ರಿ & ಎಕ್ಸಿಟ್ ಆಗಲು ಮೂರೇ ದಾರಿ!

Pinterest LinkedIn Tumblr

ಕುಂದಾಪುರ: ಕೋವಿಡ್-19 ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಉಡುಪಿ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 7 ರಿಂದ 11 ಗಂಟೆಯ ಮವರೆಗೆ ವಿನಾಯತಿ ನೀಡಲಾಗಿದ್ದು ಯಾವುದೇ ಖರೀದಿ, ವೈದ್ಯಕೀಯ ತುರ್ತು ಅಗತ್ಯತೆಗಳಿಲ್ಲದೆಯೂ ವಾಹನಗಳನ್ನು ಬೀದಿಗಿಳಿಸುವುದು ಕಂಡುಬಂದ ಹಿನ್ನೆಲೆ ಕುಂದಾಪುರ ಪೊಲೀಸರು ‘ಬ್ಯಾರಿಕೇಡ್’ ವ್ಯವಸ್ಥೆಗೆ ಮೊರೆಹೋಗಿದ್ದು ಕುಂದಾಪುರ ನಗರ ಒಳಕ್ಕೆ, ಹೊರಕ್ಕೆ ಹೋಗಲು ಕೇವಲ ಮೂರು ಮಾರ್ಗ ಮಾತ್ರ ವಾಹನ ಸವಾರರಿಗೆ ಲಭ್ಯವಿದೆ. ಇದು ಪ್ರಾಯೋಗಿಕ ವ್ಯವಸ್ಥೆ ಮಾತ್ರವೇ ಆಗಿದ್ದು ಜನಸಾಮಾನ್ಯರಿಗೆ ತೊಂದರೆಯಾದರೆ ಮೊದಲಿನಂತೆಯೇ ವ್ಯವಸ್ಥೆ ಇರಲಿದೆ.

ಏನಿದು ಬ್ಯಾಕರಿಕೇಡ್ ಅಳವಡಿಕೆ ತಂತ್ರ…?
ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿಯಿಂದ ಸಂಗಮ್ ಜಂಕ್ಷನ್ ತನಕ ಕುಂದಾಪುರ ನಗರ ಸಂಪರ್ಕಕ್ಕೆ ಹಲವು ಮಾರ್ಗಗಳಿದ್ದವು. ಆದರೆ ಸದ್ಯ ಅವುಗಳು ಸೇರಿದಂತೆ ಕೆಲ ಆಯಕಟ್ಟಿನ ಮಾರ್ಗಗಳನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದೆ. ಇದರಿಂದ ಅನಗತ್ಯವಾಗಿ ಬೀದಿಗಿಳಿದು ಪೊಲೀಸರ ಕಣ್ತಪ್ಪಿಸಿ ಕುಂದಾಪುರ ನಗರಕ್ಕೆ ಎಂಟ್ರಿ ಕೊಡುವರ ಆಟಾಟೋಟಪಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. ಎಲ್ಲವೂ ಪೊಲೀಸರು ಅಂದುಕೊಂಡಂತೆ ಆದರೆ ನಗರದೊಳಗೆ ಅನಗತ್ಯ ವಾಹನಗಳ ಓಡಾಟಕ್ಕೆ ಅಂಕುಶ ಬೀಳೋದು ಗ್ಯಾರೆಂಟಿ.

ಸಕ್ಸಸ್ ಆಗುತ್ತಾ ಪೊಲೀಸರ ಪ್ಲ್ಯಾನ್?
ಸದ್ಯ ನಗರದೊಳಗೆ ಬರಲು ಹಾಗೂ ಹೊರಕ್ಕೆ ಹೋಗಲು ಕೇವಲ ಮೂರು ಮಾರ್ಗವಿದೆ. ರಾಷ್ಟ್ರೀಯ ಹೆದ್ದಾರಿ ಮೂಲಕವಾಗಿ ಬಂದರೆ ಶಾಸ್ತ್ರೀ ಸರ್ಕಲ್ ಅಥವಾ ಸಂಗಮ್ ಜಂಕ್ಷನ್ ಮೂಲಕ ಚಿಕ್ಕನ್ ಸಾಲ್ ರಸ್ತೆಯಲ್ಲಿ ಬರಬಹುದು. ಕೋಡಿ, ಹಳೆಅಳಿವೆ ಮೂಲಕ ಬರುವುದಾದರೆ ಕುಂದಾಪುರ ನಗರದೊಳಗೆ ಇರುವ ಚಿನ್ಮಯಿ ರಸ್ತೆ ಮೂಲಕ ಬರಲು ಸಾಧ್ಯವಿದೆ. ಮೂರೇ ಪ್ರದೇಶದಲ್ಲಿ ವಾಹನಗಳು ತೆರಳಬೇಕಾದ್ದರಿಂದ ಬೆಳಿಗ್ಗೆನ  ವಿನಾಯತಿ ಅವಧಿಯಲ್ಲಿ ಟ್ರಾಫಿಕ್ ಕಿರಿಕಿರಿ ಹೆಚ್ಚಲಿದೆ. ಅಲ್ಲದೇ ಸಕಾರಣವನ್ನಿಟ್ಟುಕೊಂಡು ನಗರದೊಳಕ್ಕೆ ಬರುವ ಜನರಿಗೂ ಅನಗತ್ಯ ತೊಂದರೆಯಾಗಲಿದೆ.

ವಾಹನ ಸವಾರರಿಗೆ ಟೆನ್ಶನ್ ಶುರು….!
ಪೊಲೀಸರ ಈ ಹೊಸ ಪ್ರಯೋಗದಿಂದಾಗಿ ಅನಗತ್ಯ ರಸ್ತೆಗೆ ಬಂದು ಬೀದಿ ಸುತ್ತುತ್ತಿದ್ದ ವಾಹನ ಸವಾರರಿಗೆ ತಲೆನೋವು ಆರಂಭವಾಗಿದೆ. ಪೊಲೀಸರ ಕಣ್ತಪ್ಪಿಸಿ ಬೇರೆಬೇರೆ ರಸ್ತೆಗಳಲ್ಲಿ ಓಡಾಡುವ ವಾಹನಗಳು ಹೆಚ್ಚಿದ್ದವು. ಅಲ್ಲದೇ ಲಾಕ್ ಡೌನ್ ನಿಯಮ ಜಾರಿಯಾದ ಬಳಿಕ ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ವಾಹನ ದಾಖಲೆ ಇಲ್ಲದಿರುವುದು, ಹೆಲ್ಮೆಟ್ ಬಳಸದಿರುವುದು ಸೇರಿದಂತೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಲು ಕೂಡ ಪೊಲೀಸರಿಗೆ ಅವಕಾಶಗಳು ಹೆಚ್ಚಿದೆ.

ಲಾಠಿ ಇಲ್ಲ..ಬಾಯಿ ಮಾತಿನ ಮಾಹಿತಿ…!
ವೈದ್ಯಕೀಯ, ಮೆಡಿಕಲ್ ವಿಚಾರಕ್ಕೆ ಬರಲು ಸಾಕಷ್ಟು ವಿನಾಯಿತಿ ನೀಡಲಾಗಿದೆ. ಆದರೂ ಅನಗತ್ಯ ಸಂಚಾರ, ಹಳೆ ಮೆಡಿಸಿನ್ ಚೀಟಿ ಬಳಸಿ ಪೊಲೀಸರನ್ನೇ ದಾರಿ ತಪ್ಪಿಸುತ್ತಿದ್ದ ಕೆಲವರಿಗೆ ಪೊಲೀಸರು ಜಾಗೃತಿ ಹೇಳಿ ಕಳುಹಿಸಿದರು. ಸಂಚಾರಿ ನಿಯಮ ಪಾಲಿಸದೇ ಅನಗತ್ಯವಾಗಿಯೇ ಬಂದ ಕಾರು, ಬೈಕ್, ಆಟೋ ರಿಕ್ಷಾಗಳು ಸೇರಿದಂತೆ ಹಲವು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರು.

ಅನಗತ್ಯ ವಾಹನಗಳ ಓಡಾಟ, ಸಂಚಾರ ದಟ್ಟಣೆ ಬಗ್ಗೆ ಉಡುಪಿ ಎಸ್ಪಿ ಅವರಿಗೆ ಹಲವಾರು ದೂರು ಬಂದ ಹಿನ್ನೆಲೆ ಸೂಕ್ತ ಕ್ರಮಕ್ಕೆ ಅವರು ಆದೇಶಿಸಿದ್ದು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಪಿಎಸ್ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.