ಕರಾವಳಿ

ಕಾಪುವಿನಲ್ಲಿ ಇಸ್ಪೀಟ್ ಆಟ; ನಾಲ್ವರ ಬಂಧನ, ಪರಾರಿಗೆ ಯತ್ನಿಸಿ ಕೈ ಮುರಿದುಕೊಂಡ ಜುಗಾರಿಕೋರ!

Pinterest LinkedIn Tumblr

ಉಡುಪಿ: ಕೋವಿಡ್-19 ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಇದ್ದರೂ ಕೂಡ ಅದನ್ನು ಉಲ್ಲಂಘಿಸಿ ಜುಗಾರಿ ಆಟ ಅಲ್ಲಲ್ಲಿ ನಡೆಯುತ್ತಿದೆ. ಉಡುಪಿ ಜಿಲ್ಲೆ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಸ್ಪಿಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದು ಪರಾರಿಯಾಗಲು ಯತ್ನಿಸಿದ ಇಬ್ಬರ ಪೈಕಿ ಓರ್ವ ಬಿದ್ದು ಕೈ ಮೂಳೆ ಮುರಿದುಕೊಂಡಿದ್ದಾನೆ.

ಕಾಪು ಪಡು ಏಣಗುಡ್ಡೆ ನಿವಾಸಿ ರವಿ ಪೂಜಾರಿ(46), ಕಾಪು ಮಲ್ಲಾರು ಕೊಂಬಗುಡ್ಡೆಯ ಪ್ರಸನ್ನ (38), ಪಳ್ಳಿಗುಡ್ಡೆಯ ಪುನಿತ್(29), ಕಲ್ಲಾಪು ಕಟಪಾಡಿಯ ವರುಣ್ (25) ಬಂಧಿತ ಆರೋಪಿಗಳು. ರೋಹಿತ್ ಹಾಗೂ ಪ್ರಭಾಕರ್ ಎನ್ನುವರು ಪರಾರಿಯಾಗಲು ಯತ್ನಿಸಿದ್ದು ಈ ಪೈಕಿ ರೋಹಿತ್ ಓಡುವಾಗ ಬಿದ್ದು ಕೈ ಮೂಳೆ ಮುರಿದುಕೊಂಡಿದ್ದಾನೆ ಎನ್ನಲಾಗಿದೆ.

ಬುಧವಾರ ಸಂಜೆ ಸುಮಾರಿಗೆ ಕಾಪುವಿನ ಕೋಟೆ ಗ್ರಾಮದ ಕಲ್ಲಾಪು ಎಂಬಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜುಗಾರಿ ಆಡಲಾಗುತ್ತಿದೆಯೆಂಬ ಖಚಿತ ವರ್ತಮಾನದ ಕಾಪು ಠಾಣೆ ಪಿಎಸ್ಐ ಐ.ಆರ್. ಗಡ್ಡೇಕರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ಕೋವಿದ್-19 (ಕರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಮಾನವ ಪ್ರಾಣಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ರೋಗದ ಸೋಂಕು ಹರಡುವ ಸಾಧ್ಯತೆ ಇದೆ ಎನ್ನುವ ವಿಷಯ ತಿಳಿದು ಸಹ ಗುಂಪು ಸೇರಿಕೊಂಡು ಮುಖಕ್ಕೆ ಯಾವುದೇ ರೀತಿಯ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಅಂದರ್‌ ಬಾಹರ್‌ ಆಟ ಅಡುತ್ತಿದ್ದರ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳಿಂದ ಇಸ್ಪೀಟ್ ಆಟಕ್ಕೆ ಬಳಸಿದ್ 1660 ರೂ. ನಗದು, ಅಂದರ್ ಬಾಹರ್ ಆಟಕ್ಕೆ ಬಳಸಲಾದ 52 ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ ಹಳೇ ದಿನ ಪತ್ರಿಕೆಗಳಿದ್ದು, ಅಲ್ಲದೇ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 269 ಮತ್ತು 87 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.