ಕರಾವಳಿ

ಕೊರೊನಾಗಿಂತಲೂ ಮೋದಿ ಭಯಾನಕ : ಪ್ರಭಾವಿ ವ್ಯಕ್ತಿಗಳ ವಿರುದ್ಧ ಪ್ರಚೋದನಾಕಾರಿ ಸಂದೇಶ ಹರಡುತ್ತಿದ್ದ ಇಬ್ಬರ ಬಂಧನ

Pinterest LinkedIn Tumblr

ಮಂಗಳೂರು, ಎಪ್ರಿಲ್.15: ಕೊರೊನಾ ಮಹಾ ಮಾರಿಯಿಂದ ದೇಶ ಲಾಕ್ ಡೌನ್ ಆಗಿರುವ ಈ ಸಂದರ್ಭದಲ್ಲಿ ಕೊರೋನ ಸೋಂಕಿಗೆ ಸಂಬಂಧಿಸಿದಂತೆ ದೇಶದ ಪ್ರಧಾನ ಮಂತ್ರಿ, ಗೃಹ ಸಚಿವರು ಹಾಗೂ ಪ್ರಭಾವಿ ವ್ಯಕ್ತಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅವಹೇಳನಕಾರಿ ಸಂದೇಶ ಹರಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಕಬಕ ಸಮೀಪದ ಉರಿಮಜಲು ನಿವಾಸಿ ಅಬ್ದುಲ್ ಬಶೀರ್ ಯಾನೆ ನಿಸಾರ್ ಅಹಮ್ಮದ್ ಹಾಗೂ ಪಣಕಜೆ ನಿವಾಸಿ ಮಹಮ್ಮದ್ ಇಲ್ಯಾಸ್ ಬಂಧಿತ ಆರೋಪಿಗಳಾಗಿದ್ದಾರೆ.

ಇವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಪ್ರಚೋದನಾಕಾರಿ ಸಂದೇಶಗಳನ್ನು ಹರಡುತ್ತಿದ್ದರು. ಅಲ್ಲದೆ ಗೃಹ ಸಚಿವರ ಭಾವ ಚಿತ್ರ ವಿಕೃತಗೊಳಿಸಿದ್ದರು. ಕೊರೊನಾ ರೋಗಕ್ಕೆ ಗೃಹ ಸಚಿವರು ಬಲಿಯಾಗಿದ್ದಾರೆ ಎಂಬುವುದಾಗಿ ವಿಕೃತವಾಗಿ ಬರೆದುಕೊಂಡಿದ್ದರು. ಅಲ್ಲದೆ, ಕೊರೊನಾಗಿಂತಲೂ ಮೋದಿ ಭಯಾನಕ ಎಂಬುವುದಾಗಿಯೂ ಪೋಸ್ಟ್ ಮಾಡಿದ್ದರು.

ಫೇಸ್ ಬುಕ್ ನ ಮೈಕಾಲ್ತೊ ಬಿಸಯಾ ಎಂಬ ಪೇಜ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಅವಹೇಳನ ಮಾಡಿದ್ದರು. ಇದಕ್ಕೆ ನಾಗರಿಕ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸೈಬರ್ ಪೊಲೀಸರ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಇನ್ನು ಆರೋಪಿಗಳು ಕೆಲವು ಸಂಘಟನೆಗಳ ಜತೆ ಸಂಬಂಧವನ್ನು ಹೊಂದಿದ್ದಾರೆ ಎಂಬುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಮತ್ತು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶಾಲವಾದ ನೆಟ್‌ವರ್ಕ್‌ನ ವಿವರಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Comments are closed.