ಕರಾವಳಿ

ಮಂಗಳೂರು : ಸ್ನೇಹಿತನನ್ನೇ ಸೂಟ್ ಕೇಸಲ್ಲಿ ತುಂಬಿಸಿ ಸಾಗಿಸಲು ಯತ್ನಿಸಿದ ವಿದ್ಯಾರ್ಥಿ ಪೊಲೀಸ್ ವಶ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು: ದೇಶಕ್ಕೇ ದೇಶವೇ ಕೊರೋನಾ ಮಹಾಮಾರಿಯನ್ನು ಎದುರಿಸಲು ಲಾಕ್ ಡೌನ್ ಆಗಿದ್ದು ಈ ವೇಳೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಸೂಟ್ ಕೇಸಲ್ಲಿ ತುಂಬಿಸಿ ಅಪಾರ್ಟ್ ಮೆಂಟ್ ಒಳಕ್ಕೆ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಸ್ವಾರಸ್ಯಕರ ಘಟನೆ ಮಂಗಳೂರಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ನಗರದ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತನನ್ನು ಬಿಟ್ಟಿರಲಾರದೆ ಆತನನ್ನು ತಾನು ವಾಸ್ತವ್ಯವಿರುವ ಅಪಾರ್ಟ್ ಮೆಂಟ್ ಒಳಕ್ಕೆ ಸೂಟ್ ಕೇಸಲ್ಲಿ ತುಂಬಿಸಿ ಸಾಗಿಸುತ್ತಿದ್ದ ವೇಳೆ ಕದ್ರಿ ಪೊಲೀಸ್ ವಶವಾಗಿದ್ದಾನೆ.

ಘಟನೆ ವಿವರ :

ಕದ್ರಿ ಠಾಣಾ ವ್ಯಾಪ್ತಿಯ ಆರ್ಯ ಸಮಾಜ ರಸ್ತೆಯ ಅಪಾರ್ಟ್ ಮೆಂಟ್ ಒಂದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯೊಬ್ಬ ಬಾಡಿಗೆಗೆ ವಾಸವಾಗಿದ್ದ. ವಸತಿ ಸಮುಚ್ಚಯ ಅಸೋಸಿಯೇಷನ್ ಲಾಕ್ ಡೌನ್ ಹಿನ್ನಲೆಯಲ್ಲಿ ವಾಸ್ತವ್ಯ ಇರುವವರು ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಣೆ ಮಾಡಿತ್ತು.

ವಿದ್ಯಾರ್ಥಿ ಮಾತ್ರ ತಾನು ಒಂಟಿಯಾಗಿದ್ದು, ತನ್ನ ಗೆಳೆಯನನ್ನು ರೂಮಿಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳುತ್ತಿದ್ದ ಎನ್ನಲಾಗಿದೆ.

ಆದರೆ ಇದಕ್ಕೆ ಅನುಮತಿ ನೀಡಿರಲಿಲ್ಲ. ಹಠ ಬಿಡದ ವಿದ್ಯಾರ್ಥಿ ಇಂದು ಬೆಳಗ್ಗೆ ತನ್ನ ಗೆಳೆಯನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದು ಈ ವೇಳೆ ಶಂಕೆಯ ಮೇಲೆ ಸೂಟ್ ಕೇಸ್ ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕದ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಬ್ಬರನ್ನು ಕದ್ರಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

Comments are closed.