ಕರಾವಳಿ

ಪಡಿತರ ವಿತರಣೆ : ದ.ಕ. ಜಿಲ್ಲೆಯಲ್ಲಿ 48000 ಕ್ವಿಂಟಾಲ್ ಅಕ್ಕಿ ವಿತರಣೆ -ಉಡುಪಿ ಪ್ರಥಮ/ದ.ಕ.ಜಿಲ್ಲೆಗೆ ದ್ವಿತೀಯ ಸ್ಥಾನ

Pinterest LinkedIn Tumblr

 

ಮಂಗಳೂರು ಎಪ್ರಿಲ್ 07:ಕರೋನಾ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ಎರಡೂ ತಿಂಗಳ ಪಡಿತರವನ್ನು ಒಟ್ಟಿಗೇ ವಿತರಿಸಲಾಗುತ್ತಿದೆ. ಏಪ್ರಿಲ್ 2ರಂದು ಪಡಿತರ ವಿತರಣೆ ಆರಂಭವಾಗಿದ್ದು, ಇದುವರೆಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.73 ಲಕ್ಷ ಕಾರ್ಡುದಾರರಿದ್ದು, ಭಾನುವಾರದವರೆಗಿನ ಅಂಕಿ ಅಂಶದ ಪ್ರಕಾರ ಸುಮಾರು 98000 ಕಾರ್ಡುದಾರರಿಗೆ ಪಡಿತರದಲ್ಲಿ ಸುಮಾರು 48000 ಕ್ವಿಂಟಾಲ್ ಅಕ್ಕಿ ವಿತರಿಸಲಾಗಿದೆ.

ಬಿಪಿ‌ಎಲ್ ಕುಟುಂಬದ ಪ್ರತೀ ಸದಸ್ಯರಿಗೆ 10 ಕೆಜಿ ಅಕ್ಕಿ, ಅಂತ್ಯೋದಯ ಕುಟುಂಬಗಳಿಗೆ ಪ್ರತೀ ಕಾರ್ಡ್‌ಗೆ 70 ಕೆಜಿ ಹಾಗೂ ಎಪಿ‌ಎಲ್ ಕಾರ್ಡುಗಳಿಗೆ 20 ಕೆಜಿ (ಕೆಜಿಗೆ ತಲಾ ರೂ. 15ರಂತೆ) ಅಕ್ಕಿ ನೀಡಲಾಗುತ್ತಿದೆ.

ಸುಳ್ಯ ತಾಲೂಕಿಗೆ ಒಟಿಪಿ ರಿಯಾಯಿತಿ:

ಸುಳ್ಯ ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ನೆಟ್‌ವರ್ಕ್ ಸಮಸ್ಯೆಯಿಂದ ಮೊಬೈಲ್ ಒಟಿಪಿ ಜನರೇಟ್ ಆಗುವಲ್ಲಿ ವಿಳಂಭವಾಗುತ್ತಿದೆ. ಇದರಿಂದ ಕಾರ್ಡ್‌ದಾರರು ಸಾಲಿನಲ್ಲಿ ಬಹಳ ಹೊತ್ತು ನಿಲ್ಲಬೇಕಾಗಿ ಬರುತ್ತಿದೆ.

ಇದರಿಂದ ಸಾಮಾಜಿಕ ಅಂತರ ಕಾಪಾಡಿ, ಕರೋನಾ ನಿಯಂತ್ರಣಕ್ಕೆ ಕಷ್ಟಕರವಾಗಿರುವುದರಿಂದ ಸುಳ್ಯ ತಾಲೂಕಿನಲ್ಲಿ ಪಡಿತರ ಪಡೆಯುವಾಗ ಒಟಿಪಿ ಕಡ್ಡಾಯದಿಂದ ರಿಯಾಯಿತಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಒಟಿಪಿ ಇಲ್ಲದೆ ಪಡಿತರ ವಿತರಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಒಟಿಪಿ ಮೂಲಕವೇ ಪಡಿತರ ಸುಗಮವಾಗಿ ನಡೆಯುತ್ತಿರುವುದರಿಂದ ಹಿಂದಿನಂತೆ ಒಟಿಪಿ ಮೂಲಕವೇ ಪಡಿತರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Comments are closed.