ಕರಾವಳಿ

ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ : ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ಅಮಾನತು

Pinterest LinkedIn Tumblr

ಹಲ್ಲೆಗೊಳಗಾದ ಅರ್ಚಕ ಶ್ರೀನಿವಾಸ್ ಭಟ

ಮಂಗಳೂರು ಮಾರ್ಚ್ 30 : ಆದಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಶ್ರೀನಿವಾಸ್ ಭಟ್ ಮಾರ್ಚ್ 28 ರಂದು ದೇವಸ್ಥಾನದ ಪೂಜೆಗೆ ತೆರಳುವ ಸಮಯದಲ್ಲಿ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸುಬ್ರಹ್ಮಣ್ಯ ಘಟಕದ ಗೃಹರಕ್ಷಕ ವಿಕೇಶ್ ಎಂಬವರು ಪರೋಕ್ಷವಾಗಿ (ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪ) ಭಾಗಿಯಾಗಿರುವುದರಿಂದ ಘಟಕಾಧಿಕಾರಿಯ ಶಿಫಾರಸ್ಸಿನ ಮೇರೆಗೆ ಅವರನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟ ಡಾ: ಮುರಳೀ ಮೋಹನ್ ಚೂಂತಾರು ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಶಂಕರ್‌ ರನ್ನು ಈಗಾಗಲೆ ಜಿಲ್ಲಾ ಎಸ್ಪಿ ಅಮಾನತು ಗೊಳಿಸಿದ್ದರು.

ಘಟನೆ ವಿವರ:
ಆದಿ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ಶನಿವಾರ ರಾತ್ರಿಯ ಪೂಜೆಗೆಂದು ದೇವಳಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಸುಬ್ರಹ್ಮಣ್ಯ ಠಾಣಾ ಸಿಬ್ಬಂದಿ ಶಂಕರ್ ಅವರು ಲಾಕ್‌ಡೌನ್ ಸಂದರ್ಭ ಎಲ್ಲಿಗೆ ತೆರಳುತ್ತಿದ್ದೀರಿ ಎಂದು ಪ್ರಶ್ನಿಸಿ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ದೇವಳಕ್ಕೆ ಪೂಜೆಗೆ ತೆರಳುತ್ತಿರುವುದಾಗಿ ಮನವರಿಕೆ ಮಾಡಲೆತ್ನಿಸಿದರೂ ಕ್ಯಾರೇ ಅನ್ನದೇ ಕೈಗೆ ಮತ್ತು ಸೊಂಟದ ಭಾಗಕ್ಕೆ ಹೊಡೆದಿರುವುದಾಗಿ ಅರ್ಚಕರು ಅರ್ಚಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಳಿಕ ದೇವಳದ ಕಾರ್ಯನಿರ್ವಹಣಾಧಿಕಾರಿ ಈ ಬಗ್ಗೆ ಪುತ್ತೂರು ಉಪ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿದ್ದರು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಟ್ವಾಳ ಪೊಲೀಸ್ ಉಪವಿಭಾಗಾಧಿಕಾರಿಯಿಂದ ಘಟನೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾಹಿತಿ ಪಡೆದುಕೊಂಡು, ಅವರ ವರದಿಯನ್ನಾಧರಿಸಿ ಆರೋಪಿ ಪೊಲೀಸ್ ಸಿಬ್ಬಂದಿ ಶಂಕರ್‌ರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಘಟನೆಯ ಕುರಿತಂತೆ ಇಲಾಖಾ ಹಂತದಲ್ಲಿ ವಿಚಾರಣೆ ಮುಂದುವರಿದಿದೆ.

Comments are closed.