ಕರಾವಳಿ

ಶ್ರೀಕ್ಷೇತ್ರ ಕಟೀಲಿನಲ್ಲಿ ಅಮ್ಮನ ದರ್ಶನಕ್ಕೆ ನಿರ್ಬಂಧ – ಭಕ್ತಾದಿಗಳು ಮನೆಯಲ್ಲೇ ಆರಾಧಿಸಲು ಸೂಚನೆ

Pinterest LinkedIn Tumblr

ಮಂಗಳೂರು ; ಕೊರೊನ ವೈರಸ್ ಅನ್ನು ಹತ್ತಿಕ್ಕುವ ಕ್ರಮವಾಗಿ ದೇವಾಲಯಗಳಲ್ಲಿ ಎಲ್ಲ ಸೇವೆ ಗಳನ್ನು ರದ್ದುಪಡಿಸಿ ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಭಕ್ತರಿಗೆ ದೇವರ ದರ್ಶನದ ಅವಕಾಶ ಮಾತ್ರ ಕಲ್ಪಿಸಲಾಗಿತ್ತು.‌

ಇದೀಗ ಮಾನ್ಯ ಆಯುಕ್ತರ ಸುತ್ತೋಲೆ ದೇವಳಕ್ಕೆ ತಲುಪಿದ್ದು ಅದರಂತೆ ದೇವರ ಪೂಜಾವಿಧಿಗಳನ್ನು ಸಿಬ್ಬಂದಿಗಳ ಜೊತೆಗೂಡಿ ಮಾಡುವುದನ್ನು ಹೊರತುಪಡಿಸಿ ದರ್ಶನವೂ ಸೇರಿದಂತೆ ಭಕ್ತಾದಿಗಳ ಪಾಲ್ಗೊಳ್ಳುವಿಕೆಯನ್ನು ಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಕೊರೊನವನ್ನು ಹತ್ತಿಕ್ಕುವ ದೃಷ್ಟಿಯಿಂದ ಸರಕಾರಕ್ಕೆ ಈ ಸುತ್ತೋಲೆ ಅನಿವಾರ್ಯವಾಗಿದೆ ಎನ್ನುವುದನ್ನು ನಾವು ಮನಗಾಣಬೇಕು. ಲೋಕಹಿತಕ್ಕೆ ಸದ್ಭಕ್ತರು ಶ್ರಮಿಸಬೇಕು. ಆದ್ದರಿಂದ ಎಲ್ಲ ಭಕ್ತಾದಿಗಳು ಈ ವಿಚಾರದಲ್ಲಿ ಸಹಕರಿಸಬೇಕಾಗಿ ಕಳಕಳಿಯಿಂದ ವಿನಂತಿಸುತ್ತೇವೆ ಎಂದು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲಿನ ಆಡಳಿತಮಂಡಳಿಯ ಪ್ರಕಟಣೆ ತಿಳಿಸಿದೆ.

ಕಟೀಲಮ್ಮನಿಮ್ಮ ನಿಮ್ಮ ಮನೆಯ ದೇವರಕೋಣೆಯಲ್ಲಿಯೇ ಸನ್ನಿಹಿತರಾಗಿದ್ದಾರೆ. ಅಲ್ಲಿ ಕಟೀಲಮ್ಮನಿಗೆ ಕೈ ಮುಗಿದು ಅಲ್ಲೇ ನಿತ್ಯ ದೇವಿಯನ್ನು ಆರಾಧಿಸಬೇಕು.ಮನೆಯಲ್ಲಿ ಸುಮ್ಮನಿರುವ ಬದಲು ಪ್ರತಿಯೊಬ್ಬರೂ ಕೋಟಿಜಪ ಯಜ್ಞದಲ್ಲಿ ನಾವೆಲ್ಲ ಸೇರಿ ಜಪಿಸಿದ

*ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ ||*
ಮಂತ್ರದ ಜೊತೆಗೆ
*ದೇಹಿ ಸೌಭಾಗ್ಯಮಾರೋಗ್ಯಮ್ ದೇಹಿ ದೇವಿ ಪರಮ್ ಸುಖಮ್ |
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ||*

ಮಂತ್ರವನ್ನು ಪಠಿಸುತ್ತಾ ಕೊರೊನಾ ಎಂಬ ಮಹಾಮಾರಿ ತೊಲಗುವಂತೆ, ಎಲ್ಲರಿಗೂ ಆರೋಗ್ಯನೀಡುವಂತೆ ಪ್ರಾರ್ಥಿಸೋಣ.

ಈ ಮಹಾಮಾರಿ ನಿವಾರಣೆಯಾದ ನಂತರ ಎಲ್ಲರಿಗೂ ದೇವರ ದರ್ಶನದ ಅವಕಾಶ ದೊರಕಿದ ಮೇಲೆ ಪ್ರತಿಯೊಬ್ಬರೂ ಬರಬೇಕಾಗಿ ಈ ಮೂಲಕ ವಿನಂತಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments are closed.