ಮಂಗಳೂರು : ಕಾನೂನುಬಾಹಿರವಾಗಿ ತಂಬಾಕು ವಸ್ತುಗಳನ್ನು ವ್ಯಾಪಾರ ಮಾಡುವವರ ಮೇಲೆ ಹದ್ದಿನ ನಿಗಾ ವಹಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ದ.ಕ ಜಿಲ್ಲಾಧಿಕಾರಿ ಸಿಂಧು.ಬಿ ರೂಪೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದ.ಕ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು.
ಶಾಲಾ ಕಾಲೇಜು ಸಮೀಪ ಪರಿಸರದಲ್ಲಿ ತಂಬಾಕು ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರಿಗೆ ಈ ಮೊದಲು ರೂ.200 ದಂಡ ವಿಧಿಸಿದ್ದರೂ, ಮತ್ತೆ ಅದೇ ವ್ಯಾಪಾರವನ್ನು ಮುಂದುವರೆಸುತ್ತಿರುವುದು ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಇಂತಹ ಪ್ರಕ್ರಿಯೆಯನ್ನು ಮುಂದುವರೆಸುತ್ತಿರುವ, ಪುನರಾವರ್ತಿತ ಅಪರಾಧಿಗಳನ್ನು ಪತ್ತೆ ಹಚ್ಚಿ ಅಂತಹ ವ್ಯಾಪಾರಸ್ಥರ ಅಂಗಡಿಗಳನ್ನು ಗುರುತಿಸಿ ಪಟ್ಟಿ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಶಾಲಾ, ಕಾಲೇಜು ವ್ಯಾಪ್ತಿಗಳಲ್ಲಿರುವ ಅಂಗಡಿಗಳಲ್ಲಿ ತಂಬಾಕು ವಸ್ತುಗಳನ್ನು ಮಾರಾಟ ಮಾಡುತ್ತಿರುವ ಕುರಿತು ಸಂಬಂಧಪಟ್ಟ ಶಾಲಾ ಸಿಬ್ಬಂದಿ ವರ್ಗ ಗಮನ ಹರಿಸಬೇಕು, ಮತ್ತು ಶಾಲಾ ಕಾಲೇಜು ವ್ಯಾಪ್ತಿಯಲ್ಲಿನ ಅಂಗಡಿಗಳಿಗೆ ಆಯಾ ಸಂಸ್ಥೆಗಳಿಂದ ತಂಬಾಕು ಮುಕ್ತ ಅಂಗಡಿ ಎಂದು ಘೋಷಣೆ ಹೊರಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕೆಲವು ಇಲಾಖೆಗಳ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿರುವ ಹೋರ್ಡಿಂಗ್ಸ್‍ನಲ್ಲಿ ತಂಬಾಕು ನಿಯಂತ್ರಣ ಕುರಿತು ಜಾಹೀರಾತು ನೀಡುವ ಕುರಿತು ಸಭೆಯಲ್ಲಿ ಸಲಹೆಗಳನ್ನು ನೀಡಲಾಯಿತು. ನಗರ, ಹಳ್ಳಿ ಪ್ರದೇಶಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅನುಷ್ಠಾಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್, ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.