ಮಂಗಳೂರು : ಯಕ್ಷಗಾನ ರಂಗಸ್ಥಳಕ್ಕೆ ಬಹಳ ಪಾವಿತ್ರ್ಯವಿದೆ. ಕಲಾವಿದರು ತಾವು ಪಾತ್ರ ನಿರ್ವಹಿಸುವ ರಂಗಸ್ಥಳದಲ್ಲೇ ಗೌರವ ಪಡೆಯುವುದು ಒಂದು ಯೋಗಾಯೋಗ. ಅಂಥವರ ಕಲಾಸೇವೆ ಯಾವತ್ತೂ ಸ್ಮರಣೀಯವಾದುದು’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿ ಜರಗಿದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಆಟದ ರಂಗಸ್ಥಳದ ಮೇಲೆ ಏರ್ಪಡಿಸಲಾದ ‘ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಐದನೇ ಮೇಳದ ಹಿರಿಯ ಮದ್ದಲೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ವೇಷಧಾರಿ ರವಿರಾಜ ಪನೆಯಾಲ ಅವರಿಗೆ ಒಂಬತ್ತನೇ ವರ್ಷದ ‘ಬೊಂಡಾಲ ಪ್ರಶಸ್ತಿ’ ಯನ್ನು ಅವರು ಪ್ರದಾನ ಮಾಡಿದರು. ಮಂಗಳೂರಿನ ಖ್ಯಾತ ಲೆಕ್ಕಪರಿಶೋಧಕ ಬಿ.ಶಿವಾನಂದ ಪೈ ಮುಖ್ಯ ಅತಿಥಿಗಳಾಗಿ ಶುಭಾಶಂಸನೆಗೈದರು.
ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಹಾಗೂ ಯಕ್ಷಾಂಗಣ ಮಂಗಳೂರು ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಂಸ್ಮರಣಾ ಭಾಷಣ ಮಾಡಿ ಮಾತನಾಡುತ್ತಾ ‘ಆದರ್ಶ ಶಿಕ್ಷಕರಾಗಿ ಊರಿನ ಪಟೇಲರಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ದಿ.ಬೊಂಡಾಲ ಜನಾರ್ದನ ಶೆಟ್ಟರು ಯಕ್ಷಗಾನದ ಹಿರಿಯ ಅರ್ಥಧಾರಿಯಾಗಿ ಜಿಲ್ಲೆಯಲ್ಲಿ ಮನೆಮಾತಾಗಿದ್ದರು. ಅವರ ಪುತ್ರ ದಿ.ರಾಮಣ್ಣ ಶೆಟ್ಟರು ಭೂಮಾಪಕ ಅಧಿಕಾರಿಯಾಗಿದ್ದೂ ಯಕ್ಷಗಾನದ ಹವ್ಯಾಸಿ ವೇಷಧಾರಿಯಾಗಿ, ಸಂಘಟಕರಾಗಿ ಪ್ರಸಿದ್ಧರಾಗಿದ್ದರು. ಅನೇಕ ವರ್ಷಗಳಿಂದ ಬೊಂಡಾಲದಲ್ಲಿ ನಡೆಯುತ್ತಿರುವ ಕಟೀಲು ಮೇಳದ ಬಯಲಾಟಗಳ ನೇತೃತ್ವ ವಹಿಸಿದ್ದ ಈ ಇಬ್ಬರು ಹಿರಿಯರ ಸಾಮಾಜಿಕ ಕಳಕಳಿ ಅನುಪಮ’ ಎಂದು ನುಡಿದರು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟ್ ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು. ಬೊಂಡಾಲ ರತ್ನಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಸುಪ್ರೀತ್ ಶೆಟ್ಟಿ ಹಾಗೂ ಶಂಭೂರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ‘ಶ್ರೀ ದೇವಿ ಮಹಾತ್ಮೆ’ ಬಯಲಾಟ ಜರಗಿತು.



Comments are closed.