ಕರಾವಳಿ

ಕುಂಜತ್ತಬೈಲ್‌ : ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಅಪಹರಣ ಪ್ರಕರಣ – ಆರೋಪಿ ಬಾಗಲಕೋಟೆಯಲ್ಲಿ ಸೆರೆ

Pinterest LinkedIn Tumblr

ಮಂಗಳೂರು, ಫೆಬ್ರವರಿ 23 : ಮಂಗಳೂರಿನ ಕುಂಜತ್ತಬೈಲ್‌ನಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಾಗಲಕೋಟೆಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ನಿವಾಸಿ ಪರಶುರಾಮ (26) ಎಂದು ಹೆಸರಿಸಲಾಗಿದೆ.

ಬಾಗಲಕೋಟೆ ಮೂಲದ ಪ್ರಸ್ತುತ ಕುಂಜತ್ತಬೈಲ್‌ನ ಜಪ್ಪಿನಗುತ್ತು ನಿವಾಸಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಆರೋಪಿ ಪುಸಲಾಯಿಸಿ ಅಪಹರಣ ಮಾಡಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕಾವೂರು ಪೊಲೀಸರು ಆರೋಪಿಯನ್ನು ಬಾಗಲಕೋಟೆಯಲ್ಲಿ ಬಂಧಿಸಿ, ಬಾಲಕಿಯನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಬಾಲಕಿಯ ಕುಟುಂಬದವರು ಮತ್ತು ಅಪಹರಣ ಪ್ರಕರಣದ ಆರೋಪಿ ಪರಶುರಾಮ ಯಾನೆ ಪರಶು ಬಾಗಲಕೋಟೆಯವರಾಗಿದ್ದು, ಮಂಗಳೂರಿಗೆ ಕೂಲಿ ಕೆಲಸಕ್ಕಾಗಿ ಬಂದವರಾಗಿದ್ದಾರೆ.

ಘಟನೆ ವಿವರ :  ಫೆ.14ರಂದು ಸಂಜೆ 16 ವರ್ಷದ ಬಾಲಕಿ ಶಾಲೆಯಿಂದ ಮನೆಗೆ ಬಂದ ಬಳಿಕ ಆರೋಪಿ ಪುಸಲಾಯಿಸಿ ಹೊರಗೆ ಕರೆದುಕೊಂಡು ಹೋಗಿದ್ದು ಆ ಸಂದರ್ಭದಲ್ಲಿ ಸ್ಥಳೀಯರು ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಂದೆ ಪುತ್ರಿ ನಾಪತ್ತೆಯಾಗಿದ್ದಾಳೆ ಹಾಗೂ ಆಕೆಯನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದು, ಪೋಕ್ಸೋ ಪ್ರಕರಣ ದಾಖಲಾಗಿತ್ತು.ಇದೀಗ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.