ಮಂಗಳೂರು: ಹಳೆಯ ತಲೆಮಾರಿನ ಹಿರಿಯ ಅರ್ಥಧಾರಿಗಳಾದ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ. ಬೊಂಡಾಲ ರಾಮಣ್ಣ ಶೆಟ್ಟಿ ಸ್ಮರಣಾರ್ಥ ನೀಡಲಾಗುವ ‘ಬೊಂಡಾಲ ಪ್ರಶಸ್ತಿ ‘ ಗೆ 2019 – 20 ನೇ ಸಾಲಿನಲ್ಲಿ ಕಟೀಲು ಮೇಳದ ಹಿರಿಯ ಯಕ್ಷಗಾನ ವೇಷಧಾರಿ ರವಿರಾಜ ಪನೆಯಾಲ ಮತ್ತು ಮದ್ದಲೆಗಾರ ಮಣಿಮುಂಡ ಸುಬ್ರಹ್ಮಣ್ಯಶಾಸ್ತ್ರೀ ಆಯ್ಕೆಯಾಗಿದ್ದಾರೆ. ಫೆಬ್ರವರಿ 21, 2020 ರಂದು ಶುಕ್ರವಾರ ರಾತ್ರಿ ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ನಡೆಯುವ ಕಟೀಲು ಮೇಳದ ಬಯಲಾಟದ ರಂಗಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ.
ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿಯವರು ಪ್ರತಿವರ್ಷದಂತೆ ಈ ಬಾರಿಯೂ ಏರ್ಪಡಿಸಿರುವ ಎರಡು ದಿನಗಳ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ‘ಬೊಂಡಾಲ ಜನಾರ್ದನ ಶೆಟ್ಟಿ, ರಾಮಣ್ಣ ಶೆಟ್ಟಿ ಸಂಸ್ಮರಣೆ – ಪ್ರಶಸ್ತಿ ಪ್ರದಾನ ಸಮಾರಂಭ’ ಜರಗಲಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅಧ್ಯಕ್ಷತೆ ವಹಿಸುವರು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡುವರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡುವರು. ಮಾಜಿ ಸಚಿವ ಬಿ.ರಮಾನಾಥ ರೈ, ಲೆಕ್ಕ ಪರಿಶೋಧಕ ಶಿವಾನಂದ ಪೈ, ಬೊಂಡಾಲ ಸೀತಾರಾಮ ಶೆಟ್ಟಿ ಅತಿಥಿಗಳಾಗಿರುವರು.
ಯಕ್ಷೋತ್ಸವದ ಅಂಗವಾಗಿ ಬೊಂಡಾಲದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಫೆ20 ರಂದು ‘ತುಳಸಿ ಜಲಂಧರ – ಮೀನಾಕ್ಷಿ ಕಲ್ಯಾಣ’ ಹಾಗೂ ಫೆ.21ರಂದು ‘ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಲಿದೆ.


Comments are closed.