ಕರಾವಳಿ

ಸ್ಟೇಟ್‌ಬ್ಯಾಂಕ್ ಮೀನು ಮಾರುಕಟ್ಟೆಗೆ ಶಾಸಕ ಕಾಮತ್ ಭೇಟಿ : ಶೀಘ್ರ ಮಾರುಕಟ್ಟೆ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚನೆ

Pinterest LinkedIn Tumblr

ಮಂಗಳೂರು : ನಗರದ ಹೃದಯಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯ ಕುರಿತು ಶಾಸಕ ಕಾಮತ್ ಅವರು ವ್ಯಾಪಾರಿಗಳೊಂದಿಗೆ ಚರ್ಚಿಸಿದರು.

ಮಂಗಳೂರಿನ ಮೀನು ಮಾರುಕಟ್ಟೆಯ ಮೂಲಭೂತ ಸೌಕರ್ಯಗಳ ಕುಂದು ಕೊರತೆಯ ಕುರಿತು ಶಾಸಕರಲ್ಲಿ ಸ್ಥಳೀಯರು ಮನವಿ ಮಾಡಿದ್ದರು. ಮಾರುಕಟ್ಟೆಯಲ್ಲಿ ನಿರಂತರವಾಗಿ ನಡೆಯುವ ಕಳ್ಳತನದ ಬಗ್ಗೆ ಈ ಹಿಂದೆಯೇ ವ್ಯಾಪಾರಿಗಳು ಮನವಿ ಮಾಡಿದ್ದರು. ಹಾಗೂ ಮನವಿಯ ಎರಡು ದಿನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕೊಟ್ಟ ಶಾಸಕರನ್ನು ವ್ಯಾಪಾರಿಗಳು ಅಭಿನಂದಿಸಿದರು. ಮಾರುಕಟ್ಟೆಯ ಮೇಲ್ಛಾವಣಿಯು ಜೀರ್ಣಾವಸ್ಥೆಯಲ್ಲಿದ್ದು ಅದನ್ನು ರಿಪೇರಿ ಮಾಡಿಸಿಕೊಡುವ ಬಗ್ಗೆ ಶಾಸಕರಲ್ಲಿ ಮನವಿ ಮಾಡಿದರು.

ಈ ಕುರಿತು ಪ್ರತಿಕ್ರಯಿಸಿರುವ ಶಾಸಕ ಕಾಮತ್, ನಗರದ ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೂ ಇಲ್ಲಿನ ವ್ಯಾಪಾರಿಗಳಿಗೂ ಅವಿನಾಭಾವ ಸಂಬಂಧವಿದೆ. ಅದೆಷ್ಟೋ ವರ್ಷಗಳಿಂದ ಜೀವನೋಪಾಯಕ್ಕಾಗಿ ಮಾರುಕಟ್ಟೆಯನ್ನೇ ಅವಲಂಭಿಸಿರುವ ಅನೇಕ ವ್ಯಾಪಾರಿಗಳಿದ್ದಾರೆ. ಅವರೆಲ್ಲರ ಹಿತ ದೃಷ್ಠಿಯಿಂದ ಮೀನು ಮಾರುಕಟ್ಟೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.

ಮೀನು ಮಾರಾಟಗಾರರ ಮೀನುಗಳು ಹಾಗೂ ಸಲಕರಣೆಗಳ ಕಳ್ಳತನದ ಬಗ್ಗೆ ಇಲ್ಲಿನ ವ್ಯಾಪಾರಿಗಳು ಕ್ರಮ ಕೈಗೊಳ್ಳುವಂತೆ ಹಾಗೂ ಸಿಸಿ ಟಿವಿ ಅಳವಡಿಸಲು ಮನವಿ ಮಾಡಿದ್ದರು. ಸದ್ಯ ಸಿಸಿ ಟಿವಿ ಅಳವಡಿಸಲಾಗಿದೆ. ಹಾಗೂ ಮತ್ತೆ ಕಳ್ಳತನ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮಾರುಕಟ್ಟೆಯ ಮೇಲ್ಛಾವಣಿ ದುರಸ್ತಿ, ತ್ಯಾಜ್ಯ ನಿರ್ವಹಣೆಗೆ ತೊಟ್ಟಿ ನಿರ್ಮಾಣ, ನೀರಿನ ಪೈಪ್ ಅಳವಡಿಕೆ, ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ನೀರು ಹರಿದುಹೋಗಲು ವ್ಯವಸ್ಥೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಂತ ಹಂತವಾಗಿ ಈ ಎಲ್ಲಾ ಕೆಲಸಗಳನ್ನು ಮಾಡಿಕೊಡಲಾಗುವುದು. ಹಾಗೂ ದಾಸ್ತಾನು ಕೊಠಡಿ ನಿರ್ಮಾಣದ ಬಗ್ಗೆಯೂ ಯೋಜನೆಯಿದ್ದು ಅನುದಾನಗಳನ್ನು ಜೋಡಿಸಿ ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡಿಕೊಡಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಮನಪಾ ಸದಸ್ಯರಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಬಿಜೆಪಿ ಮುಖಂಡರಾದ ವಸಂತ್ ಜೆ ಪೂಜಾರಿ, ಸ್ಥಳೀಯ ವ್ಯಾಪಾರಿಗಳ ಸಂಘದ ಸದಸ್ಯರು ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

Comments are closed.