ಕರಾವಳಿ

ಸುರತ್ಕಲ್‌ನಲ್ಲಿ ಎಸ್‌ಡಿಪಿಐ ಪ್ರತಿಭಟನೆ : ಅನಿಲ‌ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸಲು ಆಗ್ರಹ

Pinterest LinkedIn Tumblr

ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ವಲಯ ವತಿಯಿಂದ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ದ ಇತ್ತೀಚಿಗೆ ಸುರತ್ಕಲ್ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.

ಈ‌ ಸಂದರ್ಭ SDTU ಜಿಲ್ಲಾ ಜೊತೆಕಾರ್ಯದರ್ಶಿ ‘ಇರ್ಫಾನ್ ಜನತಾ ಕಾಲೊನಿ’ ಇವರು‌ ಮಾತನಾಡಿ, “ಅಚ್ಚೇ ದಿನ್ ಘೋಷಣೆ ಯೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿ.ಜೆ.ಪಿ ಸರ್ಕಾರ ತನ್ನ ಆಡಳಿತದುದ್ದಕ್ಕೂ ಬೆಲೆಯೇರಿಕೆ ಹಾಗೂ ಆರ್ಥಿಕ ಹಿಂಜರಿತದಿಂದ ದೇಶದ ಜನರಿಗೆ ಅನ್ಯಾಯವನ್ನು ಮಾಡುತ್ತಾ ಬಂದಿದ್ದು ಜನರಿಗೆ ಜೀವನ‌ ಮಾಡಲಾರದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಒಂದು ಕಡೆ ಉದ್ಯೋಗ ನಷ್ಟ, ಇನ್ನೊಂದೆಡೆ ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಮಾಡಿದೆ ಎಂದು ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಅತಂತ್ರ ಸ್ಥಿತಿಯಲ್ಲಿ ಜೀವನ‌ ನಡೆಸುತ್ತಿದ್ದಾರೆ. ತಕ್ಷಣವೇ ಅನಿಲ‌ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಎಸ್.ಡಿ.ಪಿ.ಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು, ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ನೂರುಲ್ಲಾ ಕುಲಾಯಿ ಹಾಗೂ ಇನ್ನಿತರ ಪಕ್ಷದ ಸದಸ್ಯರು,ಸಾರ್ವಜನಿಕರು ಉಪಸ್ಥಿತರಿದ್ದರು. ಜಬ್ಬಾರ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಣೆ ಮಾಡಿದರು.

Comments are closed.