ಕರಾವಳಿ

ಬೈಂದೂರು ಒತ್ತಿನೆಣೆ ವಿದ್ಯಾರ್ಥಿನಿ ಕೊಲೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ತಿರಸ್ಕೃತ

Pinterest LinkedIn Tumblr

ಉಡುಪಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ 2015ರ ಜೂ. 17 ರಂದು ಬೈಂದೂರು ಒತ್ತಿನೆಣೆ ಬಳಿ ನಡೆದಿದ್ದ ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿರುವ ಪೋಕ್ಸೋ ನ್ಯಾಯಾಯಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ತಿರಸ್ಕರಿಸಿ ಆದೇಶಿಸಿದ್ದಾರೆ.

(ಆರೋಪಿ ಸುನೀಲ್)

ಬೈಂದೂರಿನ ಯೋಜನಾ ನಗರದ ನಿವಾಸಿಯಾಗಿರುವ ಆರೋಪಿ ಸುನೀಲ್ ಯಾನೆ ಕೆಪ್ಪೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದಿದ್ದು ಜಾಮೀನು ನೀಡಬೇಕೆಂಬ ಅಂಶವನ್ನುಮುಂದಿಟ್ಟುಕೊಂಡು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಆದರೆ ತಜ್ಞರು ಹಾಗೂ ತನಿಖಾಧಿಕಾರಿಗಳ ವಿಚಾರಣೆ ನಡೆಯಬೇಕಿದ್ದು ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿರುವುದರಿಂದ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.

(ಸಂಗ್ರಹ ಚಿತ್ರ)

ಪ್ರಕರಣದ ಹಿನ್ನೆಲೆ…
ತಾನು ಓದಿ, ವಿದ್ಯಾವಂತಳಾಗಿ ತನ್ನ ಬಡ ಕುಟುಂಬಕ್ಕೆ ಬೆನ್ನೆಲುಬಾಗಬೇಕೆಂಬ ಮಹಾದಾಸೆ ಹೊತ್ತ ಆ ಹೆಣ್ಮಗಳು ನಿತ್ಯ ದೂರದ ಬೈಂದೂರು ಸರಕಾರಿ ಕಾಲೇಜಿಗೆ ದುರ್ಗಮ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಹೋಗಿಬರುತ್ತಿದ್ದವಳು. ಆದರೇ ಅಂದು ಮಾತ್ರ ಕಾಲೇಜು ಮುಗಿಸಿ ಹೊರಟ ಆಕೆ ಮನೆಗೆ ಮರಳಿಲ್ಲ. ಸತತ ಹುಡುಕಾಟದ ಬಳಿಕ ಆಕೆ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ದೇವಾಡಿಗ ಸಮುದಾಯ ಹಾಗೂ ಕಾಲೇಜು ವಿದ್ಯಾರ್ಥಿಗಳು ಆರೋಪಿಗಳ ಪತ್ತೆಗಾಗಿ ಅಂದು ಪ್ರತಿಭಟಿಸಿದ್ದರು. ಅಂದಿನ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಹಾಗೂ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮತ್ತು ತಂಡ ಎರಡೇ ದಿನದಲ್ಲಿ ಸುನೀಲ್ ಹಾಗೂ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದರು. ಕಳೆದ ಐದು ವರ್ಷದಿಂದ ಪ್ರಕರಣದ ಪ್ರಮುಖ ಆರೋಪಿ ಸುನೀಲ್ ನ್ಯಾಯಾಂಗ ಬಂಧನದಲ್ಲಿದ್ದು ಇನ್ನೊಬ್ಬ ಜಾಮೀನು ಪಡೆದಿದ್ದಾನೆ.

Comments are closed.