ಕರಾವಳಿ

ಮಾರ್ಚ್ 7 ಮತ್ತು 8 : ಮಂಗಳೂರಿನಲ್ಲಿ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ – ಮುಖ್ಯ ಮಂತ್ರಿ ಬಿ.ಎಸ್.ವೈಯವರಿಂದ ಉದ್ಘಾಟನೆ

Pinterest LinkedIn Tumblr

ಮಂಗಳೂರು : ರಾಜ್ಯ ಪತ್ರಕರ್ತರ 35ನೇ ಸಮ್ಮೇಳನ ಮಾ.7 ಮತ್ತು 8ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು, ಇದು ಕರಾವಳಿ ಕರ್ನಾಟಕದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಆಶ್ರಯದಲ್ಲಿ ನಡೆಯಲಿರುವ ಮೊದಲ ಸಮ್ಮೇಳನವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 2019ರ ಜುಲೈ 1ರಂದು ಮಂಗಳೂರಿನಲ್ಲಿ ಮೊಟ್ಟ ಮೊದಲ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಸಂಘಟಿಸಿತ್ತು. ಇದೀಗ ಕರಾವಳಿಯ ಚರಿತ್ರೆಯಲ್ಲಿ ಮೊದಲ ಬಾರಿಗೆ ಕೆಯುಡಬ್ಲ್ಯೂಜೆ ವತಿಯಿಂದ ನಡೆಯಲಿರುವ ರಾಜ್ಯ ಸಮ್ಮೇಳನಕ್ಕೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆತಿಥ್ಯ ವಹಿಸಿಕೊಂಡಿದೆ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮ್ಮೇಳನದ ವೆಬ್‍ಸೈಟ್‍ನ್ನು ಅನಾವರಣಗೊಳಿಸಿ ಸಮ್ಮೇಳನದ ತಯಾರಿಗೆ ಚಾಲನೆ ನೀಡಿದ್ದಾರೆ.

ಈಗಾಗಲೇ ಸಮ್ಮೇಳನದಲ್ಲಿ ಭಾಗವಹಿಸಲಿರುವ ಸದಸ್ಯರ ನೋಂದಣಿ ಪ್ರಕ್ರಿಯೆ ವೆಬ್‍ಸೈಟ್ ಮೂಲಕ ಆರಂಭಗೊಂಡಿದೆ. ಸಮ್ಮೇಳನದ ತಯಾರಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ ವೈ ಮತ್ತು ಯು.ಟಿ. ಖಾದರ್ ಸಮ್ಮೇಳನದ ತಯಾರಿಗೆ ಕೈ ಜೋಡಿಸಿದ್ದಾರೆ.ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ದೇಶದ ವಿವಿಧ ರಾಜ್ಯಗಳ ಮತ್ತು ವಿದೇಶದ ಪತ್ರಕರ್ತರು ಸೇರಿದಂತೆ ಸುಮಾರು 3 ಸಾವಿರಕ್ಕೂ ಅಧಿಕ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಹೆಗ್ಗಡೆಯವರ ಸಾನಿಧ್ಯದಲ್ಲಿ ಮುಖ್ಯ ಮಂತ್ರಿಗಳಿಂದ ಉದ್ಘಾಟನೆ :

ಸಮ್ಮೇಳನವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಸಾನಿಧ್ಯದಲ್ಲಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸ್ಪೀಕರ್, ಸಚಿವರು ಸೇರಿದಂತೆ ಪತ್ರಿಕೋದ್ಯಮ ದಿಗ್ಗಜರು, ಸಾಧಕರು, ಸಂಪಾದಕರು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಗಳನ್ನು ಪತ್ರಕರ್ತರಿಗೆ ಪ್ರದಾನ ಮಾಡಲಾಗುವುದು. ಸಾಧಕ ಪತ್ರಕರ್ತರನ್ನು ಸನ್ಮಾನ ಮಾಡಲಾಗುವುದು. ಎರಡೂ ದಿನಗಳು ಪತ್ರಕರ್ತರು, ಮಾಧ್ಯಮ ಸಾಧಕ-ಬಾದಕಗಳ ಬಗ್ಗೆ, ಕರಾವಳಿ ಜಿಲ್ಲೆ ಅಭಿವೃದ್ಧಿ ಬಗ್ಗೆ ವಿಚಾರ ಗೋಷ್ಠಿಗಳು ನಡೆಯಲಿವೆ ಎಂದು ಶಿವಾನಂದ ತಗಡೂರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಯುಡಬ್ಲುಜೆ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.

Comments are closed.