ಕರಾವಳಿ

ಜನರ ಅಗತ್ಯ ಬೇಡಿಕೆಗಳನ್ನು ಪರಿಶೀಲಿಸಿ : ಹೂಡಿಕೆದಾರರ ಕಾರ್ಯಗಾರ ಉದ್ಘಾಟಿಸಿ ಬಿ.ಜೆ ಪುಟ್ಟಸ್ವಾಮಿ

Pinterest LinkedIn Tumblr

ಮಂಗಳೂರು ಫೆಬ್ರವರಿ 11 : ಜನರಿಗೆ ಅಗತ್ಯವಾಗಿ ಬೇಕಾಗಿರುವ ಬೇಡಿಕೆಗಳನ್ನು ಪರಿಶೀಲನೆ ನಡೆಸಿ ಸಾರ್ವಜನಿಕರ ಪ್ರಯೋಜನಕ್ಕೆ ದಾರಿ ಮಾಡಿ ಕೊಡುವ ಕಾರ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ ಪುಟ್ಟಸ್ವಾಮಿ ಹೇಳಿದರು. ಮಂಗಳೂರಿನ ಪೂಂಜಾ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ನಡೆದ ಕರಾವಳಿ ಜಿಲ್ಲೆಗಳ ಆರ್ಥಿಕಾಭಿವೃದ್ಧಿ ಯೋಜನೆ ಕುರಿತು ಹೂಡಿಕೆದಾರರ ಕಾರ್ಯಗಾರ ಸಮಾರಂಭವನ್ನು ಉದ್ಘಾಟಿಸಿ ಮಾತಾಡಿದರು.

ವಿವಿದ ಇಲಾಖೆಗಳು ಮಾಡಲಾಗದೇ ಇರುವ ಯೋಜನೆಗಳ ಅನುಷ್ಠಾನವನ್ನು ಅಥವಾ ಗ್ಯಾಪ್ ಫಿಲ್‍ಅಪ್ ಮಾಡುವ ಕಾರ್ಯವನ್ನು ಅಭಿವೃದ್ಧಿ ಪ್ರಾಧೀಕಾರ ಮಾಡಬೇಕಾಗಿದೆ. ಪ್ರವಾಸೋಧ್ಯಮದಲ್ಲಿ ಮುಂದುವರೆಯುತ್ತಿರುವ ಗುಜರಾತ್ ರಾಜ್ಯಕ್ಕೆ ವರ್ಷದಲ್ಲಿ 575 ಲಕ್ಷ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಿದ್ದರೆ, ಕರ್ನಾಟಕಕ್ಕೆ ಕೇವಲ 5 ಲಕ್ಷದಷ್ಟು ಪ್ರವಾಸಿಗರು ಮಾತ್ರ ಭೇಟಿ ನೀಡುತ್ತಿದ್ದಾರೆ. ಭಾರೀ ಹಿಂದೆ ಉಳಿದಿರುವ ಕರ್ನಾಟಕ ಪ್ರವಾಸೋಧ್ಯಮವು ಆದಾಯದಲ್ಲಿ ಮುಂದುವರೆಯಬೇಕಿದೆ, ಇದರ ಕುರಿತು ಮುಖ್ಯಮಂತ್ರಿಗಳಲ್ಲಿ ಚರ್ಚೆ ನಡೆಸಲಾಗಿದೆ ಎಂದರು.

ಕಾರವಾರ ಬಂದರು, ಬೆಳಕ್ಕೇರಿ ಬಂದರು ಹಾಗೂ ಅಲ್ಲಿನ ಇನ್ನಿತರ ಪ್ರದೇಶಗಳಿಗೆ ರೈಲ್ವೇ, ವಿಮಾನ ಮತ್ತು ರಾಷ್ಟ್ರೀಯ ಹೆದ್ದಾರಿ ಈ ಮೂರು ಸಂಪರ್ಕವನ್ನು ಆ ಸ್ಥಳಗಳಿಗೆ ಮಾಡಿದಾಗ ವ್ಯಾಪಾರ ರಫ್ತು ಕಾರ್ಯಗಳು ಅತೀ ಸುಲಭವಾಗಿ ನಡೆಯಲು ಅನೂಕೂಲವಾಗುತ್ತದೆ ಜೊತೆಗೆ ಪ್ರವಾಸೋಧ್ಯಮದಲ್ಲಿ ಮುಂದುವರಿಯಲು ಸಾಧ್ಯವಾಗುವಂತೆ ಬಜೆಟ್ ಚರ್ಚೆ ಸಮಯದಲ್ಲಿ ಈ ಕುರಿತು ಪ್ರಸ್ತಾಪ ಮಾಡಲಾಗುವುದು ಎಂದು ಹೇಳಿದರು.

ಕರಾವಳಿ ಅಭಿವೃದ್ಧಿ ಪ್ರಾಧೀಕಾರದ ನಿಯೋಜಿತ ಅಧ್ಯಕ್ಷ ಮಾತನಾಡಿದ ರತ್ನಾಕರ್ ಹೆಗ್ಡೆ, ರಾಜಕೀಯಕ್ಕೆ ಬರಲು ಯೋಗ್ಯತೆ ಜೊತೆಗೆ ಯೋಗವು ಕೂಡಿಬರಬೇಕು. ಬಜೆಟ್‍ನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧೀಕಾರಕ್ಕೆ ಆದಷ್ಟು ಹೆಚ್ಚಿನ ಒತ್ತು ನೀಡಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮಾಡಬೇಕು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷರಲ್ಲಿ ಮನವಿ ಮಾಡಿದರು.

ಕರಾವಳಿ ಜಿಲ್ಲೆಯ ವ್ಯಾಪ್ತಿಯ ಯೋಜನೆಗಳಲ್ಲಿನ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಂತೆ ಕರಾವಳಿಯನ್ನು ಸುಸ್ಥಿರವಾಗಿ ಅಭಿವೃದ್ಧಿಗೊಳಿಸುವ ಕಾರ್ಯ ಹೇಗೆ ಮಾಡಬೇಕು ಮತ್ತು ಮುಂದಿನ ಪೀಳಿಗೆಗೆ ಯೋಜನೆಯ ಪ್ರಯೋಜನವಾಗಬೇಕು ಎಂಬ ಉದ್ದೇಶದೊಂದಿಗೆ ಈ ಯೋಜನೆ ಮುಖ್ಯವಾಗುತ್ತದೆ. ಕಾರ್ಯಗಾರದಲ್ಲಿ ಹೂಡಿಕೆದಾರರ ಹಲವಾರು ಯೋಜನೆಗಳು, ಸಾರ್ವಜನಿಕ ಸಮಸ್ಯೆಗಳು ಮತ್ತು ಅನೇಕ ವಿಚಾರಗಳನ್ನೊಳಗೊಂಡ ವಿಷಯಗಳು ಚರ್ಚೆಯಾಗಬೇಕು ಅದರಿಂದ ಜನರಿಗೆ ಪ್ರಯೋಜನವಾಗಬೇಕು ಎಂದು ಕರಾವಳಿ ಅಭಿವೃದ್ಧಿ ಪ್ರಾಧೀಕಾರ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ| ಶಾಲಿನಿ ರಜನೀಶ್ ಹೇಳಿದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಸಿಂಧು.ಬಿ ರೂಪೇಶ್, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧೀಕಾರ ಕಾರ್ಯದರ್ಶಿ ಪ್ರದೀಪ್ ಡಿ’ಸೋಜ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಲ್ಲೊಟ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಕಾರ್ಯಗಾರದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Comments are closed.