ಕರಾವಳಿ

ಮಕ್ಕಳನ್ನು ಸಶಕ್ತರನ್ನಾಗಿ ರೂಪಿಸಲು ಪ್ರತಿ ಶಾಲೆಯಲ್ಲಿ ಆಪ್ತಸಮಾಲೋಚಕರ ನೇಮಕ : ಉಪಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥನಾರಾಯಣ

Pinterest LinkedIn Tumblr

ಮಂಗಳೂರು, ಫೆಬ್ರವರಿ.08: ಎಬಿವಿಪಿ ವತಿಯಿಂದ ಪ್ರತಿ ವರ್ಷ ನಡೆಸುವ ರಾಜ್ಯಮಟ್ಟದ ‘ವಿದ್ಯಾರ್ಥಿ ಸಮ್ಮೇಳನ’ ವಿದ್ಯಾರ್ಥಿ ಪರಿಷತ್ತಿನ ಕಾರ್ಯಚಟುವಟಿಕೆಯ ಪ್ರಮುಖ ಭಾಗಗಳಲ್ಲೊಂದು. ರಚನಾತ್ಮಕ, ಕ್ರಿಯಾಶೀಲ ಚಟುವಟಿಕೆಗೆ ಪ್ರೇರಣಾದಾಯಿ ಯಾಗಿರುವ ಶೈಕ್ಷಣಿಕ ವಲಯದ ನಾವೀನ್ಯತೆಗೆ ತನ್ನದೇ ಕೊಡುಗೆ ನೀಡುತ್ತಿರುವ ಮಂಗಳೂರಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಸಮ್ಮೇಳನವನ್ನು ನಗರದ ಕುದ್ಮುಲ್ ರಂಗರಾವ್ ಸಭಾಂಗಣ(ಪುರಭವನ)ದಲ್ಲಿ ಫೆಬ್ರವರಿ 7, 8, 9ರಂದು ಹಮ್ಮಿಕೊಳ್ಳಲಾಗಿದ್ದು, ಎಬಿವಿಪಿ 39ನೇ ರಾಜ್ಯ ಸಮ್ಮೇಳನವನ್ನು ಶುಕ್ರವಾರ ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಉದ್ಘಾಟಿಸಿದರು.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿನ ಅವಕಾಶ, ಶೈಕ್ಷಣಿಕ ಸಾಲ, ಉದ್ಯೋಗಾವಕಾಶಗಳ ಅರಿವು, ಕೌಶಲ ತರಬೇತಿಗೆ ಆದ್ಯತೆ ನೀಡಿ ಮಕ್ಕಳನ್ನು ಸಶಕ್ತರನ್ನಾಗಿ ರೂಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಯೂತ್‌ ಎಂಪವರ್‌ವೆುಂಟ್‌ ಪ್ಲಾಟ್‌ಫಾರಂ ರೂಪಿಸಿ, ಪ್ರತಿ ಶಾಲೆಗೆ ಆಪ್ತಸಮಾಲೋಚಕ (ಕೌನ್ಸೆಲರ್‌)ರನ್ನು ನೇಮಿಸಲಾಗುವುದು ಎಂದು ಹೇಳಿದರು.

ದಕ್ಷಿಣ ಕೊರಿಯಾದಲ್ಲಿ ಶೇ. 90ಕ್ಕೂ ಹೆಚ್ಚು ಕೌಶಲಯುಕ್ತ ಮಾನವಶಕ್ತಿ ಇದೆ. ಆದರೆ ನಮ್ಮ ದೇಶದಲ್ಲಿ ಈ ಪ್ರಮಾಣ ಕೇವಲ ಶೇ. 2. ಯುವಕರು ವೈಟ್‌ ಕಾಲರ್‌ ಉದ್ಯೋಗದತ್ತಲೇ ಹೆಚ್ಚು ಆಕರ್ಷಿತರಾಗುತ್ತಿದ್ದಾರೆಯೇ ಹೊರತು ಬ್ಲೂ ಕಾಲರ್‌ ಕೆಲಸಗಳ ಬಗ್ಗೆ ಗಮನ ಹರಿಸುತ್ತಿಲ್ಲ. ದೇಶ ಸದೃಢವಾಗಬೇಕಾದರೆ ಬ್ಲೂ ಕಾಲರ್‌ ಕೆಲಸದತ್ತ ಆಸಕ್ತಿ ವಹಿಸಬೇಕು. ಇಂತಹ ಕೆಲಸಕ್ಕೆ ಬೇಕಾದ ಕೌಶಲಗಳನ್ನು ಶಾಲಾ ಹಂತದಲ್ಲಿಯೇ ಕಲಿಸಿಕೊಡುವ ನಿಟ್ಟಿನಲ್ಲಿ ಯೂತ್‌ ಎಂಪವರ್‌ವೆುಂಟ್‌ ಪ್ಲಾಟ್‌ಫಾರಂ ತೊಡಗಿಸಿಕೊಳ್ಳಲಿದೆ ಎಂದು ಡಾ| ಅಶ್ವತ್ಥ ನಾರಾಯಣ ಹೇಳಿದರು.

ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವ ಜನಾಂಗ ಕೆಲಸ ಹುಡುಕುವ ಬದಲು ಕೆಲಸ ನೀಡುವವರಾಗಬೇಕು. ಉದ್ಯೋಗದಾತರಾಗುವ ನಿಟ್ಟಿನಲ್ಲಿ ಬೇಕಾದ ಪೂರಕ ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕೇ ಹೊರತು ದೇಶಕ್ಕೆ, ಸಮಾಜಕ್ಕೆ ತೊಂದರೆಯಾಗುವಂತಹ ಕೆಲಸ ಮಾಡ ಬಾರದು. ಅಂತಹ ವಿಚಾರಗಳಿಗೆ ನಮ್ಮ ವಿ.ವಿ.ಯಲ್ಲಿ ಅವಕಾಶವಿಲ್ಲ ಎಂದು ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಹೇಳಿದರು.

ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹಾಜಬ್ಬರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಉಪಮುಖ್ಯಮಂತ್ರಿ ಸಮ್ಮಾನಿಸಿದರು. ಸಮ್ಮಾನಕ್ಕೂ ಮುನ್ನ ಹಾಜಬ್ಬರನ್ನು ಪರಿಚಯಿಸುತ್ತಿದ್ದಂತೆ ಸೇರಿದ ವಿದ್ಯಾರ್ಥಿಗಳು ಭಾರೀ ಚಪ್ಪಾಳೆ, ಹರ್ಷೋದ್ಘಾರದೊಂದಿಗೆ ಹಾಜಬ್ಬರನ್ನು ಗೌರವಿಸಿದರು.

ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಶ್‌ ಚೌಹಾನ್‌, ಎಬಿವಿಪಿ ರಾಜ್ಯಾಧ್ಯಕ್ಷ ಡಾ| ಅಲ್ಲಮ ಪ್ರಭು ಗುಡ್ಡ, ಸ್ವಾಗತ ಸಮಿತಿ ಪ್ರ. ಕಾರ್ಯದರ್ಶಿ ಶಾಂತಾರಾಮ ಶೆಟ್ಟಿ, ನಗರಾಧ್ಯೆಕ್ಷೆ ಭಾರತಿ ಸಂಜಯ್ ಪ್ರಭು, ಪ್ರಮುಖರಾದ ಮಹಾಲಕ್ಷ್ಮೀ, ಶ್ರೀನಿಧಿ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ.ನಾಯಕ್ ಸ್ವಾಗತಿಸಿದರು. ಸಂಚಾಲಕ ಕೇಶವ ಬಂಗೇರ ಅತಿಥಿಗಳ ಪರಿಚಯಿಸಿದರು. ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ ನಿರೂಪಿಸಿದರು.

Comments are closed.