ಕರಾವಳಿ

ಅಕ್ರಮ ಮರಳು ದಾಸ್ತಾನು ಕಂಡುಬಂದಲ್ಲಿ ಕ್ರಿಮಿನಲ್ ಕೇಸ್: ಉಡುಪಿ ಡಿಸಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವ ಅವಧಿಯು ಮುಕ್ತಾಯಗೊಂಡಿದ್ದು, ಈ ಅವಧಿಯಲ್ಲಿ 4 ಲಕ್ಷ ಮೆಟ್ರಿಕ್ ಟನ್ ಮರಳು ತೆಗೆದು ವಿತರಿಸಲಾಗಿದೆ, ಪ್ರಸ್ತುತ ತೆಗೆದಿರುವ ಮರಳು ಜಿಲ್ಲೆಯಿಂದ ಹೊರ ಹೋಗಲು ಅವಕಾಶ ನೀಡಿಲ್ಲ, ಆದರೆ ತೆಗೆದಿರುವ ಅಷ್ಟೂ ಮರಳು ಸಾರ್ವಜನಿಕರಿಗೆ ಸಂಪೂರ್ಣವಾಗಿ ವಿತರಣೆಯಾಗದೇ, ಅನಧಿಕೃತವಾಗಿ ದಾಸ್ತಾನು ಮಾಡಿರುವ ಸಾಧ್ಯತೆಯಿದ್ದು, ಹೀಗೆ ಅನಧಿಕೃತವಾಗಿ ಮರಳು ದಾಸ್ತಾನು ಮಾಡಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕ್ರಮಿನಲ್ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಅನಧಿಕೃತ ಮರಳು ದಾಸ್ತಾನು ಪತ್ತೆ ಹಚ್ಚಲು, ಮರಳು ತುಂಬಿದ ವಾಹನಗಳು ಸ್ಟಾಕ್ ಯಾರ್ಡ್ ನಿಂದ ಹೊರಟಿರುವ ಮತ್ತು ಮರಳು ವಿತರಣೆ ಮಾಡಿರುವ ಪ್ರದೇಶಗಳ ಮಾಹಿತಿಯನ್ನು, ಮರಳು ಸಾಗಾಟ ವಾಹನಗಳಿಗೆ ಅಳವಡಿಸಿರುವ ಜಿಪಿಎಸ್ ಮೂಲಕ ಪತ್ತೆಹಚ್ಚಲಾಗುತ್ತಿದ್ದು, ಅನಧಿಕೃತವಾಗಿ ಮರಳು ದಾಸ್ತಾನು ಮಾಡಿರುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದರು.

ಜಿಲ್ಲೆಯಲ್ಲಿ ಕೆಸಿಝಡ್‍ಎಂಎ ಮೂಲಕ ಇನ್ನೂ 4 ಲಕ್ಷ ಮೆಟ್ರಿಕ್ ಟನ್ ಮರಳು ತೆಗೆಯಲು ಪ್ರಸ್ಥಾವನೆಯನ್ನು ಅನುಮೋದನೆಗೆ ಕಳುಹಿಸಿದ್ದು, ಶೀಘ್ರದಲ್ಲಿ ಅನುಮೋದನೆ ದೊರೆಯಲಿದ್ದು, ಅನುಮೋದನೆ ನಂತರ ಮರಳು ವಿತರಣೆ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Comments are closed.