ಕರಾವಳಿ

ಮಹಾನಂದಿ ಗೋಲೋಕ: ಮಾರ್ಚ್ 4ರಂದು ವಿಶಿಷ್ಟ ಕೃಷ್ಣಾರ್ಪಣಮ್

Pinterest LinkedIn Tumblr

ಮಂಗಳೂರು: ಹೊಸನಗರ ಶ್ರೀರಾಮಚಂದ್ರಾಪುರ ಮಠ ಆವರಣದಲ್ಲಿರುವ ಶ್ರೀಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ಮಾರ್ಚ್ 4ರಂದು ಕೃಷ್ಣಾರ್ಪಣಮ್ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ.

ಶ್ರೀಮಠದ 5000ಕ್ಕೂ ಹೆಚ್ಚು ಶಿಷ್ಯಭಕ್ತರು ಅಂದು ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನಧಾರಿ ಸನ್ನಿಧಿಯಲ್ಲಿ ಶ್ರೀ ವಿಷ್ಣುಸಹಸ್ರನಾಮ ಪಠಿಸಲಿದ್ದಾರೆ. ಶ್ರೀಮದಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಸನ್ನಿಧಿಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ವಿಷ್ಣು ಸಹಸ್ರನಾಮ ಸಮರ್ಪಿಸಲಾಗುತ್ತಿದೆ ಎಂದು ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋ ಸಂಪತ್ತಿನ ಉಳಿವಿಗಾಗಿಯೇ ಅವರಾತವೆತ್ತಿನ ಶ್ರೀಕೃಷ್ಣನಿಗೆ ಅಪೂರ್ವ ಗೋವರ್ಧನಗರಿ ಗೋಲೋಕದಲ್ಲಿ ಪ್ರತಿಷ್ಠಾಪನೆಯಾಗಿ ಎರಡು ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ ಗುರು, ಗೋವು, ಗೋವರ್ಧಧಾರಿಗೆ ಸೇವಾ ಸಮರ್ಪಣೆಯ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಈ ಅಪೂರ್ವ ಕಾರ್ಯಕ್ರಮ ಆಯೋಜಿಸಲಾಗಿದೆ.

ಕೃಷ್ಣಾರ್ಪಣಮ್ ಅಂಗವಾಗಿ ಗೋವರ್ಧನಗಿರಿಧಾರಿಗೆ ಐದು ಸಾವಿರಕ್ಕೂ ಹೆಚ್ಚು ಭಕ್ತರಿಂದ ವಿಷ್ಣು ಸಹಸ್ರನಾಮ ಸಮರ್ಪಣೆ, ಬೆಟ್ಟವನ್ನೇ ಛತ್ರವಾಗಿಸಿ ಅಭಯ ನೀಡಿದ ಶ್ರೀಕೃಷ್ಣನಿಗೆ ಸಹಸ್ರ ಸಹಸ್ರ ಛತ್ರ ಮೆರವಣಿಗೆ, ಸಮರ್ಪಣೆ, ಜಗಜ್ಜನನಿ ಗೋಮಾತೆಗೆ ಗೋಗ್ರಾಸ ಸಮರ್ಪಣೆ ಕಾರ್ಯಕ್ರಮಗಳು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿವರ ಮಾರ್ಗದರ್ಶನ ಮತ್ತು ಸಾನ್ನಿಧ್ಯದಲ್ಲಿ ಸಂಪನ್ನಗೊಳ್ಳಲಿವೆ.

ವಿದ್ಯಾವಾಚಸ್ಪತಿ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ನೇತೃತ್ವದಲ್ಲಿ ಐದು ಸಾವಿರಕ್ಕೂ ಹೆಚ್ಚು ಭಕ್ತರಿಂದ ವಿಷ್ಣು ಸಹಸ್ರನಾಮ ಪಾರಾಯಣ ಸಮರ್ಪಣೆ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು : ಇದೇ ಸಂದರ್ಭದಲ್ಲಿ ಸೋಪಾನಮಾಲೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು. ನೂತನ ಗೋಶಾಲೆ ಲೋಕಾರ್ಪಣೆ, ಗೋ ಆಸ್ಪತ್ರೆ, ಗೋ ಮ್ಯೂಸಿಯಂ ಲೋಕಾರ್ಪಣೆ, ಧರ್ಮಸಭೆ ನಡೆಯಲಿದೆ. ಗೋಬಂಧ ಮುಕ್ತಿ ಯೋಜನೆಯಡಿ ಪ್ರತಿಯೊಂದು ತಳಿಯ ಗೋವುಗಳಿಗೆ ಪ್ರತ್ಯೇಕ ಗೋಶಾಲೆ ನಿರ್ಮಿಸಲಾಗಿದ್ದು, ಪರಮಪೂಜ್ಯರು ಅಂದು ಇದನ್ನು ಲೋಕಾರ್ಪಣೆ ಮಾಡುವರು.

ವಿಷ್ಣು ಸಹಸ್ರನಾಮ ಸಮರ್ಪಣೆಗೆ ಸಂಕಲ್ಪಿಸಿದವರು ತಮ್ಮ ಮನೆಗಳಲ್ಲಿ ಕನಿಷ್ಠ 33 ಬಾರಿ ವಿಷ್ಣು ಸಹಸ್ರನಾಮ ಪಠಿಸಿ, ಕಾರ್ಯಕ್ರಮ ದಂದು ಶ್ರೀಗೋವರ್ಧನಧಾರಿಯ ಸನ್ನಿಧಿಯಲ್ಲಿ ಎರಡು ಬಾರಿ ಪಾರಾಯಣ ಕೈಗೊಂಡು ಸಮರ್ಪಿಸಬಹುದು.

ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶ ಮೋಹನ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ಶರ್ಮಾ, ಮಹಾನಂದಿ ಗೋಲೋಕದ ಗೌರವಾಧ್ಯಕ್ಷ ಜಿ.ವಿ.ಹೆಗಡೆ, ಸಂಚಾಲಕ ಕೆ.ಪಿ.ಯಡಪ್ಪಾಡಿ, ಮಂಗಳೂರು ವಲಯ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಕಬೆಕೋಡು ಉಪಸ್ಥಿತರಿದ್ದರು.

Comments are closed.