ಕರಾವಳಿ

ಸೇತುವೆಯಿಂದ ಹೊಳೆಗೆ ಹಾರಿ ಉದ್ಯಮಿ ಆತ್ಮಹತ್ಯೆ: ಹೆಮ್ಮಾಡಿ ಬಳಿ‌ ಮೃತದೇಹ ಪತ್ತೆ

Pinterest LinkedIn Tumblr

ಕುಂದಾಪುರ: ಹೋಟೆಲ್ ಉದ್ಯಮಿಯೋರ್ವರು ನೋಡು ನೋಡುತ್ತಿದ್ದಂತೆ ಕುಂದಾಪುರ ಸಂಗಮ್ ಸಮೀಪದ ಹೇರಿಕುದ್ರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ಪ್ರಕರಣ ಭಾನುವಾರ ಸಂಜೆ ನಡೆದಿದ್ದು ಸೋಮವಾರ ಮುಂಜಾನೆ ವೇಳೆ ಹೆಮ್ಮಾಡಿ ಸಮೀಪ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಕುಂದಾಪುರದ ಚಿಕ್ಕನ್‌ಸಾಲ್ ರಸ್ತೆ ನಿವಾಸಿ, ಮುಂಬಯಿಯನಲ್ಲಿ ಹಲವಾರು ವರ್ಷಗಳಿಂದ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದ ಕೆ.ಜಿ. ಗಣೇಶ್ (51) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಭಾನುವಾರ ಸಂಜೆ ಗಣೇಶ್ ಅವರು ಕುಂದಾಪುರ ಕಡೆಯಿಂದ ಸ್ವಲ್ಪ ದೂರದವರೆಗೆ ಆಟೋ ರಿಕ್ಷಾದಲ್ಲಿ ಬಂದಿದ್ದು, ಬಳಿಕ ಇಳಿದು ಹೇರಿಕುದ್ರು ಸೇತುವೆಯವರೆಗೆ ನಡೆದುಕೊಂಡು ಹೋಗಿದ್ದಾರೆ. ಅಲ್ಲಿ ಪರ್ಸ್, ಚಪ್ಪಲಿ ಹಾಗೂ ಕನ್ನಡಕ ಇಟ್ಟು ಎಲ್ಲರೂ ನೋಡು – ನೋಡುತ್ತಿದ್ದಂತೆ ಸೇತುವೆಯಿಂದ ಕೆಳಕ್ಕೆ ನದಿಗೆ ಹಾರಿದ್ದಾರೆ. ಇದನ್ನು ನೋಡಿದ ಕೂಡಲೇ ನದಿಯಲ್ಲಿ ದೋಣಿ ಮೂಲಕ ಮೀನು ಹಿಡಿಯುತ್ತಿದ್ದ ಮೀನುಗಾರರು ರಕ್ಷಿಸಲು ಮುಂದಾಗಿದ್ದರೂ, ಅಷ್ಟರಲ್ಲಾಗಲೇ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದು
ಗಣೇಶ್ ಅವರ ಪತ್ತೆಗೆ ಸಂಜೆಯಿಂದ ರಾತ್ರಿಯವರೆಗೂ ಶೋಧ ಕಾರ್‍ಯ ನಡೆದಿದ್ದು, ಆದರೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.

ಮುಂಬಯಿಯಲ್ಲಿ ಕಳೆದ 25 ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದ ಗಣೇಶ್ ಅವರು,4-5 ವರ್ಷಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಅಲ್ಲಿದ್ದ ಹೋಟೆಲನ್ನು ಈಗ ಲೀಸ್‌ಗೆ ಕೊಟ್ಟಿದ್ದರು. ಊರಲ್ಲಿಯೂ ಬಾಡಿಗೆಗೆ ರೂಂಗಳನ್ನು ನೀಡಿದ್ದರು. ಆರ್ಥಿಕವಾಗಿ ಅನುಕೂಲಸ್ಥರಾಗಿದ್ದು, ಅಂತದ್ದೇನು ಹಣಕಾಸಿನ ತೊಂದರೆಯೇನು ಇಲ್ಲ. ಆದರೆ ಕುಡಿತದ ಚಟವಿದ್ದು, ಇತ್ತೀಚಿಗಿನ ಕೆಲ ದಿನಗಳಲ್ಲಿ ಮಾನಸಿಕವಾಗಿ ನೊಂದಿದ್ದು, ಖಿನ್ನತೆಗೊಳಗಾಗಿದ್ದರು ನಾನು ಸಾಯ್ತೇನೆ, ಸಾಯ್ತೇನೆ ಎನ್ನುವುದಾಗಿ ಹೇಳುತ್ತಿದ್ದರು ಎಂದು ಅವರ ಆಪ್ತರು ಹೇಳುವ ಮಾತು.

Comments are closed.