ಕರಾವಳಿ

ಚಪ್ಪಲಿ, ಪರ್ಸ್ ಬ್ರಿಡ್ಜ್ ಮೇಲಿಟ್ಟು ಕುಂದಾಪುರ ಪಂಚಗಂಗಾವಳಿ ನದಿಗೆ ಹಾರಿದ ವ್ಯಕ್ತಿಗಾಗಿ ಹುಡುಕಾಟ

Pinterest LinkedIn Tumblr

ಕುಂದಾಪುರ: ಸೇತುವೆಯಿಂದ ನದಿಗೆ ಹಾರಿದ ಹೋಟೆಲ್ ಉದ್ಯಮಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಸಂಗಮ್ ಸಮೀಪದ ಹೇರಿಕುದ್ರು ಸೇತುವೆ ಮೇಲೆ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದ್ದು ಪತ್ತೆಗಾಗಿ ರಾತ್ರಿಯವರೆಗೂ ಶೋಧ ನಡೆಸಲಾಗುತ್ತಿದೆ.

ಕುಂದಾಪುರದ ಚಿಕ್ಕನ್‌ಸಾಲ್ ರಸ್ತೆ ನಿವಾಸಿ, ಮುಂಬಯಿಯನಲ್ಲಿ ಹಲವಾರು ವರ್ಷಗಳಿಂದ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದ ಕೆ.ಜಿ. ಗಣೇಶ್ (51) ನದಿಗೆ ಹಾರಿದ ಉದ್ಯಮಿ.

ತನ್ನ ಮನೆಯಿಂದ ಆಟೋ ರಿಕ್ಷಾದಲ್ಲಿ ಬಂದಿದ್ದರು ಎನ್ನಲಾದ ಗಣೇಶ್ ಅವರು ಹೇರಿಕುದ್ರು ಸೇತುವೆಯಲ್ಲಿ‌ ಇಳಿದು ನಡೆದುಕೊಂಡು ಹೋಗಿದ್ದಾರೆ. ಅಲ್ಲಿ ಪರ್ಸ್, ಚಪ್ಪಲಿ‌, ಕನ್ನಡಕ‌ ಇಟ್ಟು ಎಲ್ಲರೂ ನೋಡು – ನೋಡುತ್ತಿದ್ದಂತೆ ಸೇತುವೆಯಿಂದ ಕೆಳಕ್ಕೆ ನದಿಗೆ ಹಾರಿದ್ದಾರೆ. ಇದನ್ನು ನೋಡಿದ ಕೂಡಲೇ ನದಿಯಲ್ಲಿ ದೋಣಿ ಮೂಲಕ ಮೀನು ಹಿಡಿಯುತ್ತಿದ್ದ ಮೀನುಗಾರರು ರಕ್ಷಿಸಲು ಮುಂದಾಗಿದ್ದರೂ, ಅಷ್ಟರಲ್ಲಾಗಲೇ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.

ರಾತ್ರಿಯವರೆಗೂ ಶೋಧಕಾರ್ಯ….
ಗಣೇಶ್ ಅವರ ಪತ್ತೆಗೆ ಸಂಜೆಯಿಂದ ರಾತ್ರಿಯವರೆಗೂ ಶೋಧ ಕಾರ್‍ಯ ನಡೆದಿದ್ದು, ಆದರೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಕುಂದಾಪುರ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಕೆ.ಎನ್. ಮೊಗೇರ ನೇತೃತ್ವದಲ್ಲಿ ಪತ್ತೆ ಕಾರ್‍ಯ ಮುಂದುವರಿದಿದೆ.

ಯಾವುದೋ ವಿಚಾರವಾಗಿ ಇತ್ತೀಚಿಗಿನ ಕೆಲ ದಿನಗಳಲ್ಲಿ ಮಾನಸಿಕವಾಗಿ ನೊಂದಿದ್ದು ಗಣೇಶ್‌ ಅವರು ಖಿನ್ನತೆಗೊಳಗಾಗಿದ್ದು ನಾನು ಸಾಯುವುದಾಗಿ‌ ಆಗ್ಗಾಗೆ ಹೇಳುತ್ತಿದ್ದರು ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ.

ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿಪರಿಶೀಲನೆ ನಡೆಸಿದ್ದಾರೆ.

Comments are closed.