ಸಂಕಲ್ಪ ಸಿದ್ಧಿಯಿಂದ ಧನ್ಯತೆ : ಕೆ.ಕೆ.ಶೆಟ್ಟಿ
ಕುಂಬಳೆ : ‘ಅಗೋಚರವಾಗಿದ್ದ ದೇವತಾ ಸಾನ್ನಿಧ್ಯ ವ್ಯಕ್ತ ಪ್ರಪಂಚಕ್ಕೆ ಕಾಣಿಸಿಕೊಳ್ಳುವುದು ದೈವ ಸಂಕಲ್ಪದಿಂದ. ಅದನ್ನು ಬೆಳಕಿಗೆ ತರುವ ಸತ್ಕಾರ್ಯದಲ್ಲಿ ತೊಡಗುವುದಕ್ಕೂ ದೈವಾನುಗ್ರಹ ಬೇಕು. ಆ ಅನುಗ್ರಹ ವಿಶೇಷ ದಿಂದಲೇ ಹೊಸ ದೇವಾಲಯ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿರುವುದರಿಂದ ಬಹುದಿನಗಳ ಸಂಕಲ್ಪ ಈಡೇರಿದ ಧನ್ಯತೆಯಿದೆ’ ಎಂದು ಆಹ್ಮದ್ ನಗರದ ಉದ್ಯಮಿ ಕೆ.ಕೆ.ಶೆಟ್ಟಿ ಹೇಳಿದ್ದಾರೆ.
ಕುಂಬಳೆ ಸೀಮೆಯ ಇಚ್ಲಂಪಾಡಿ ದರ್ಬಾರ್ ಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ದೇವತಾ ಕಾರ್ಯದ ಸುಯೋಗದಿಂದಾಗಿ ಆಸ್ತಿಕರಲ್ಲಿ ಹೃದಯ ಸಂಸ್ಕಾರ ಮೂಡುವುದರೊಂದಿಗೆ ನಾಡು ಸುಭಿಕ್ಷವಾಗುತ್ತದೆ’ ಎಂದವರು ಸರ್ವರ ಸಹಕಾರ ಕೋರಿದರು.
ಇಚ್ಲಂಪಾಡಿ ದರ್ಬಾರ್ ಕಟ್ಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗದ ನೋಟ
ಕ್ಷೇತ್ರ ನಿರ್ಮಾಣ : ಸುಮಾರು 800 ವರ್ಷಗಳ ಹಿಂದೆ ಕುಂಬಳೆ ಸೀಮೆಯಲ್ಲಿ ಬಲ್ಲಾಳ ಅರಸರಿಂದ ಪೂಜಿಸಲ್ಪಟ್ಟು ಬಳಿಕ ಕಾಲಾಂತರದಲ್ಲಿ ಭೂಗರ್ಭದಲ್ಲಿ ಸೇರಿಹೋದ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಕುರಿತಾಗಿ 1980 ರ ಕಾಲಘಟ್ಟದಲ್ಲಿ ಕಾರಿಂಜ ಶ್ರೀ ಮಹಾದೇವ ಶಾಸ್ತಾರ ದೇವಸ್ಥಾನದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಮಾಹಿತಿ ಪ್ರಕಾರ 2018ರಂದು ಪ್ರಶ್ನಾ ಚಿಂತನೆ ನಡೆಸಿ ಅದರಲ್ಲಿ ಗೋಚರವಾದಂತೆ ಕುತ್ತಿಕ್ಕಾರು ಮನೆತನದ ಉದ್ಯಮಿ ಕೆ.ಕೆ.ಶೆಟ್ಟಿ ಅವರ ನೇತೃತ್ವದಲ್ಲಿ ಕ್ಷೇತ್ರ ನಿರ್ಮಾಣ ಕಾರ್ಯ ಆರಂಭಗೊಂಡಿತು.
ಇದೀಗ ಇಚ್ಲಂಪಾಡಿ ದರ್ಬಾರ್ ಕಟ್ಟೆಯ ಮುಂಡಪಳ್ಳ ಪವಿತ್ರ ಕಲ್ಯಾಣಿ ಬಳಿ ನೂತನ ಶ್ರೀ ರಾಜರಾಜೇಶ್ವರಿ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು 2020 ಫೆಬ್ರವರಿ 28 ರಿಂದ ಮಾರ್ಚಿ 07 ರವರೆಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. ಈ ಬಗ್ಗೆ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಾರಿಂಜ ಶ್ರೀ ಮಹಾದೇವ ಶಾಸ್ತಾರ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿತು.
ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಕೆ. ಶೆಟ್ಟಿ, ಕಾರ್ಯಾಧ್ಯಕ್ಷ ಎಸ್. ಎನ್.ಭಟ್ ಮುನ್ನಿಪ್ಪಾಡಿ , ಕಾರ್ಯದರ್ಶಿ ಮಂಜುನಾಥ ಆಳ್ವ ಮಡ್ವ , ಕೋಶಾಧಿಕಾರಿ ಜಯಪ್ರಸಾದ್ ರೈ ಕಾರಿಂಜ, ಕಾರಿಂಜ ಮಹಾದೇವ ಶಾಸ್ತಾರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ವಿಶ್ವನಾಥ ಮಾಸ್ಟರ್, ಎಚ್. ರಾಮ್ ಭಟ್ ಹಳೆಮನೆ, ಕೃಷ್ಣಪ್ರಸಾದ್ ರೈ ಕುತ್ತಿಕ್ಕಾರ್, ಶಿವರಾಮ್ ಭಟ್, ಉಷಾ ಶಿವರಾಮ ಭಟ್, ವಿನಯ ಕೆ. ಶೆಟ್ಟಿ, ವಿನೋದ ಜಯಪ್ರಸಾದ್ ರೈ, ಶಿವರಾಮ ಭಂಡಾರಿ ಕಾರಿಂಜ, ಶ್ಯಾಮಲಾ ಎಸ್. ರೈ ಮುಂತಾದವರು ಉಪಸ್ಥಿತರಿದ್ದರು.
Comments are closed.