ಕರಾವಳಿ

ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇರಿಸಿದ ಉಡುಪಿ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣು.

Pinterest LinkedIn Tumblr

ಮಂಗಳೂರು, ಜನವರಿ.22: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣದ (ಬಾಂಬ್‌ ಇರಿಸಿದ್ದ) ಆರೋಪಿ ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಡಿಜಿಪಿ-ಐಜಿಪಿ ನೀಲಮಣಿ ಎನ್. ರಾಜು ಅವರ ಕಚೇರಿಗೆ ಬಂದು ಶರಣಾಗಿದ್ದಾನೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಪೊಲೀಸರಿಗೆ ಶರಣಾಗಿರುವ ವ್ಯಕ್ತಿಯನ್ನು ಉಡುಪಿ ಮೂಲದ ಆದಿತ್ಯ ರಾವ್ ಎಂದು ಹೆಸರಿಸಲಾಗಿದ್ದು, ಆರೋಪಿ ಬುಧವಾರ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಆಗಮಿಸಿ ಶರಣಾಗಿರುವುದಾಗಿ ಗೃಹಸಚಿವ ಬಸವರಾಜ ಬೊಮ್ಮಾಯಿ ಖಚಿತಪಡಿಸಿದ್ದಾರೆ ಎನ್ನಲಾಗಿದೆ.

ಬುಧವಾರ ಬೆಳಗ್ಗೆ 8:45ರ ಸುಮಾರಿಗೆ ಪೊಲೀಸರೆದುರು ಶರಣಾಗಿದ್ದಾನೆ ಎಂದು ಹೇಳಲಾಗಿರುವ ಆದಿತ್ಯ ರಾವ್ ನನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದ್ದು, ಪೊಲೀಸರ ವಿಚಾರಣೆ ಸಂದರ್ಭ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ತುಂಬಿದ ಬ್ಯಾಗ್ ಇಟ್ಟಿರುವುದು ತಾನೇ ಎಂದು ಆದಿತ್ಯ ರಾವ್‌ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ಆದಿತ್ಯ ರಾವ್ ನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.ಈ ನಡುವೆ ಆರೋಪಿ ಆದಿತ್ಯನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಲು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸ್ಫೋಟಕವಿದ್ದ ಬ್ಯಾಗ್ ವೊಂದು ಪತ್ತೆಯಾಗಿತ್ತು.

ಎಂಜಿನಿಯರಿಂಗ್ ಮತ್ತು ಎಂಬಿಎ ಪದವೀಧರನಾಗಿರುವ ಆರೋಪಿ ಆದಿತ್ಯ ರಾವ್ ,ಬೆಂಗಳೂರು ವಿಮಾಣ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಕೆಲವೊಂದು ತಾಂತ್ರಿಕ ಕಾರಣದಿಂದ ಆತನ ಅರ್ಜಿ ವಜಾಗೊಂಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.ಇದೇ ರೋಷದಲ್ಲಿ 2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಜಿಸ್ಟಿಕ್‌ ನಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸ್ಪೋಟ ನಡೆಸುವುದಾಗಿ ಹುಸಿ ಬೆದರಿಕೆ ಕರೆ ಮಾಡಿ ಬಂಧನಕ್ಕೆ ಒಳಗಾಗಿದ್ದನು .ಈತ ಒಟ್ಟು ಮೂರು ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಮಾಡಿದ್ದ ಆರೋಪದಲ್ಲಿ 2018ರ ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು. ಬಳಿಕ ಜೈಲುವಾಸ ಅನುಭವಿಸಿದ್ದ.

ಮಂಗಳೂರು ಪೊಲೀಸರ ತಂಡ ಬೆಂಗಳೂರಿಗೆ..

ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸರ ತಂಡವು ಬೆಂಗಳೂರಿಗೆ ತೆರಳಿ ಆತನ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಪಿ.ಎಸ್‌.ಹರ್ಷ ಅವರು ತಿಳಿಸಿದ್ದಾರೆ.

Comments are closed.