ಕರಾವಳಿ

ಕಲಾಜಗತ್ತು ಮುಂಬಯಿ, ವಿಶ್ವಮಟ್ಟದ ತುಳು ಸಮ್ಮೇಳನದ ಸಮಾರೋಪ -ಸಂಸ್ಕೃತಿಯೊಂದಿಗೆ ಬಾಷೆಯನ್ನು ಉಳಿಸಿ ಬೆಳೆಸಿದಲ್ಲಿ ಸಮ್ಮೇಳನವು ಸಾರ್ಥಕ – ಡಾ. ಸುನಿತಾ ಎಂ. ಶೆಟ್ಟಿ

Pinterest LinkedIn Tumblr

ಮುಂಬಯಿ : ಎರಡೂ ದಿನಗಳ ಸಮ್ಮೇಳನವು ಬಹಳ ವಿಜ್ರಂಭಣೆಯಿಂದ ಜನಸಾಗರದ ಉಪಸ್ಥಿತಿಯಲ್ಲಿ ನಡೆದಿದೆ. ನಮ್ಮವರು ನಮ್ಮ ಸಂಸ್ಕೃತಿಯನ್ನು ಮರಾಠಿ ನೆಲದಲ್ಲಿ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಕೇವಲ ಸಾಂಸ್ಕೃತಿಕ ಕಾರ್ಯವನ್ನು ನಡೆಸಿದರೆ ಸಾಲದು. ಪಾಲಕರು ತುಳು ಬಾಷೆಯನ್ನು ಮಾತನಾಡುತ್ತಿದ್ದರೂ ಮಕ್ಕಳು ತುಳು ಬಾಷೆಯಲ್ಲಿ ಮಾತನಾಡುವುದು ಬಹಳ ಕಡಿಮೆ. ಸ್ಥಳೀಯ ಬಾಷೆಯೊಂದಿಗೆ ನಮ್ಮ ಮಾತೃ ಬಾಷೆಯನ್ನು ಮಕ್ಕಳು ಮನೆಯಲ್ಲಿ ಮಾತನಾಡುವಂತಾಗಬೇಕು ಆಗ ಮಾತ್ರ ಇಂತಹ ಅದ್ದೂರಿಯ ಸಮ್ಮೇಳನವು ಸಾರ್ಥಕ ಎಂದು ಮುಂಬಯಿಯ ಹಿರಿಯ ಸಾಹಿತಿ ಡಾ. ಸುನಿತಾ ಎಂ. ಶೆಟ್ಟಿ ಅವರು ಎಲ್ಲಾ ತುಳುವರಲ್ಲಿ ವಿನಂತಿಸಿದರು.

ಜನವರಿ 18 ಮತ್ತು 19ರಂದು ನಗರದ ಸಪ್ತಾಹ ಕ್ರೀಡಾಂಗಣ, ಪೊಯಿಸರ್ ಜಿಮ್ಖಾನದ ಬಳಿ, ಕಾಂದಿವಲಿ ಪಶ್ಚಿಮ, ಮುಂಬಯಿ ಇಲ್ಲಿ ಕಲಾಜಗತ್ತು ಮುಂಬಯಿ ಇದರ ವತಿಯಿಂದ ನೆರವೇರಿದ “ವಿಶ್ವ ತುಳು ಸಮ್ಮೇಳನ – ಬೊಂಬಾಯಿಡ್ ತುಳುನಾಡ್”ನ್ನು (ಮುಂಬಯಿಯಲ್ಲಿ ತುಳುನಾಡು) ಇದರ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ತುಳು ಪಂಚ ದ್ರಾವಿಡ ಬಾಷೆಗಳಲ್ಲಿ ಒಂದು. ಆದರೆ ತುಳುವನ್ನು ಎತ್ತಿ ಹಿಡಿಯುವವರಿಲ್ಲದೆ ಇತರ ನಾಲ್ಕು ಬಾಷೆಗಳಿಗೆ ಸಿಗುತ್ತಿರುವ ಸ್ಥಾನ, ತುಳು ಬಾಷೆಗೆ ಸಿಗಲಿಲ್ಲ. ಸರಕಾರವು ಇದಕ್ಕೆ ಗಮನ ನೀಡಬೇಕು. ತುಳುವಿನ ಬಗ್ಗೆ 1926 ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಾಗಿದೆ. ಆಗಲೇ ನಮ್ಮವರಿಗೆ ತುಳುವಿನ ಬಗ್ಗೆ ಅಭಿಮಾನವಿತ್ತು. ತುಳು ಶಬ್ದಕೋಶವು ರಚನೆಯಾಗಿತ್ತು. ನಮ್ಮ ಬಾಷೆಯಲ್ಲಿ ಪ್ರೀತಿಯಿರಲಿ. ಕರಾವಳಿಯ ನಾಗಪೂಜೆಯನ್ನು ಮಹಾರಾಷ್ಟ್ರಕ್ಕೆ ಮೊದಲು ತಂದವರು ತುಳುನಾಡಿನ ಅರಸರು. ನಮ್ಮ ಸಂಸ್ಕೃತಿಯೊಂದಿಗೆ ನಮ್ಮ ಬಾಷೆಗೂ ಪ್ರಾಮುಖ್ಯತೆಯನ್ನು ನೀಡೋಣ. ನಮ್ಮ ಮನೆಯಲ್ಲೇ ಬಾಷೆ ಹಾಗೂ ಸಂಸ್ಕೃತಿಯ ಉಳಿವು. ಮಕ್ಕಳು ತುಳು ಕಲಿಯುದರೊಂದಿಗೆ ಈ ಎರಡೂ ದಿನಗಳ ಕಾರ್ಯಕ್ರಮಗಳ ಪ್ರಯೋಜನಕಾರಿಯಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸದರಾದ ಗೋಪಾಲ ಶೆಟ್ಟಿ ಯವರು ಮಾತನಾಡಿ ಇಂತಹ ಸಮಾರಂಭವು ಪ್ರತೀ ವರ್ಷ ನಡೆಯುದರೊಂದಿಗೆ ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು ಎನ್ನುತ್ತಾ ವಿಶ್ವಮಟ್ಟದ ತುಳು ಸಮ್ಮೇಳನವು ಮಳೆಯಿಂದಾಗಿ ರದ್ದುಗೊಂಡಿದ್ದು ಅದೆಷ್ಠೊ ನಷ್ಟವಾಗಿದ್ದರೂ ಕಾರ್ಯಕರ್ತರು ಎದೆಗುಂದದೆ ಶ್ರಮವಹಿಸಿ ಇದೀಗ ನಡೆಸಿದ್ದು ಸಮಾರಂಭದ ಪ್ರಮುಖರನ್ನು ಸನ್ಮಾನಿಸಿದರು. ಲತಾ ಸಂತೋಷ್ ಶೆಟ್ಟಿಯವರು ರಚಿಸಿದ ಹೊಂಗನಸು ಪುಸ್ತಕವನ್ನು ಸಂಸದರಾದ ಗೋಪಾಲ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಸ್ಥಳೀಯ ಶಾಸಕ ಸುನಿಲ್ ರಾಣೆ ಮಾತನಾಡಿ ಸಮ್ಮೇಳನಕ್ಕೆ ಶುಭ ಕೋರಿದರು.

ಮುಂಬಯಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಪ್ರಸಿದ್ದರಾಗಿ ಅಮರರಾದ ತುಳುವ ಗಣ್ಯ ವ್ಯಕ್ತಿಗಳ ಸ್ಮರಣಾರ್ಥ ಸಂಸ್ಮರಣಾ ಪ್ರಶಸ್ತಿಯನ್ನು ಹಾಗೂ ತೌಳವ ಸಿರಿ ಪ್ರಶಸ್ತಿಯನ್ನು ನಗರದ ವಿವಿಧ ಗಣ್ಯರಿಗೆ ಈ ಎರಡು ದಿನಗಳಲ್ಲಿ ನಡೆದ ಕಾರ್ಯಕ್ರಮಗಳ ಮಧ್ಯೆ ನೀಡಿ ಗೌರವಿಸಲಾಯಿತು. ಬೊಂಬಾಯಿಡ್ ತುಳುನಾಡು ಸಮಿತಿಯ ಕಾರ್ಯಾಧ್ಯಕ್ಷರಾದ ಸಮಾಜ ಸೇವಕ, ಉದ್ಯಮಿ ಏರ್ಮಾಳು ಹರೀಶ್ ಶೆಟ್ಟಿ, ಸಂಚಾಲಕರಾದ ಉದ್ಯಮಿ ಶ್ಯಾಂ ಎನ್. ಶೆಟ್ಟಿ, ಕಲಾಜಗತ್ತು ಸಂಸ್ಥೆಯ ಅಧ್ಯಕ್ಷರಾದ ತೋನ್ಸೆ ವಿಜಯಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷರಾದ ಡಾ. ಸುರೇಂದ್ರಕುಮಾರ್ ಹೆಗ್ಡೆ, ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಜೊತೆಕಾರ್ಯದರ್ಶಿ ಚ೦ದ್ರಾವತಿ ವಸಂತ್, ಜ್ಯೂಲಿಯಟ್ ಫೆರೇರಾ, ಲತಾ ಸಂತೋಷ್ ಶೆಟ್ಟಿ ಹಾಗೂ ಅತಿಥಿಗಳು ಎಲ್ಲಾ ಗಣ್ಯರನ್ನು ಗೌರವಿಸಿದರು.

ಖ್ಯಾತ ಹೋಟೇಲು ಉದ್ಯಮಿ, ಸಮಾಜ ಸೇವಕ ದಿ. ರಮಾನಾಥ ಪಯ್ಯಡೆ ಸಂಸ್ಮರಣಾ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಇವರು ಎರಡು ದಿನಗಳ ಕಾಲ ಇಂತಹ ಕಾರ್ಯಕ್ರಮವನ್ನು ನಡೆಸುವುದು ಸುಲಭ ಕೆಲಸವಲ್ಲ. ಈ ವಿಶ್ವ ತುಳು ಸಮ್ಮೇಳನವನ್ನು ಎರಡು ದಿನ ನಡೆಸಿಕೊಟ್ಟ ಏರ್ಮಾಳು ಹರೀಶ್ ಶೆಟ್ಟಿ, ಶ್ಯಾಂ ಎನ್. ಶೆಟ್ಟಿ, ತೋನ್ಸೆ ವಿಜಯಕುಮಾರ್ ಶೆಟ್ಟಿ, ಡಾ. ಸುರೇಂದ್ರಕುಮಾರ್ ಹೆಗ್ಡೆ ಇವರ ತಂಡದ ಕಾರ್ಯ ಸ್ಲಾಘನೀಯ ಎಂದರು.

ಅಂದು ಬೆಳಿಗ್ಗೆ ಭಜನೆ, ವಿಟ್ಲಪಿಂಡಿ, ಗೋಪೂಜೆ, ತುಳಸಿ ಪೂಜೆ ಇತ್ಯಾದಿ ಕಾರ್ಯಕ್ರಮ ನಡೆಯಿತು. ವಿದ್ಯಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಇವರಿಂದ ತುಳು ಹರಿಕಥೆ, ಥಾಣೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಸಾಯಿ – ವಿರಾರ್ ತಂಡದವರಿಂದ ತುಳು ಪೊರ್ಲು ಕಾರ್ಯಕ್ರಮ, ಭಿವಂಡಿ ಸಚಿನ್ ಪೂಜಾರಿ ಬಳಗದವರಿಂದ ತುಳುನಾಡ ವೈಭವ, ತುಳು ಭಜನೆ ಸ್ಪರ್ಧೆ ನಡೆಯಿತು. ಆ ನಂತರ ಜರಗಿದ ತುಳು ವಿಚಾರಗೋಷ್ಥಿ ನಡೆದಿದ್ದು ಡಾ. ಭರತ್ ಕುಮಾರ್ ಪೊಲಿಪು ರಂಗಭೂಮಿ ಬಗ್ಗೆ, ಜಯಕರ ಡಿ ಪೂಜಾರಿ ತುಳು ಲಿಪಿ ಮತ್ತು ಸಾಹಿತ್ಯದ ಬಗ್ಗೆ, ನಮ್ಮ ಟೀವಿಯ ನವೀನ್ ಶೆಟ್ಟಿ ತುಳುನಾಡಿನ ಆಚಾರ ವಿಚಾರದ ಬಗ್ಗೆ, ದಾಮೋದರ ಇರುವೈಲು ಯಕ್ಷಗಾನದ ಬಗ್ಗೆ ಮಾತನಾಡಿದರು. ಅಶೋಕ್ ಪಕ್ಕಳ ಮತ್ತು ಡಾ. ಸುರೇಂದ್ರಕುಮಾರ್ ಹೆಗ್ಡೆ ಗೋಷ್ಠಿಯನ್ನು ನಿರ್ವಹಿಸಿದರು.

ವಿವಿಧ ಕಲಾವಿಧರಿಂದ ನೃತ್ಯೋತ್ಸವ ಹಾಗೂ ತುಳು ನಾಡಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ನಂತರ ಕಲಾಜಗತ್ತು ಕಲಾವಿದರಿಂದ ಸುಧನ್ವ ಮೋಕ್ಷ ಹಾಗೂ ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ ಯವರು ರಚಿಸಿ ನಿರ್ದೇಶಿಸಿದ ಈ ಬಾಲೆ ನಮ್ಮವು ತುಳು ನಾಟಕ ಪ್ರದರ್ಶನಗೊಂಡಿತು.

ನಗರದ ವಿವಿಧ ಸಮುದಾಯದ ಹಾಗೂ ತುಳು, ಕನ್ನಡ ಮತ್ತು ಮುಂಬಯಿಯಲ್ಲಿರುವ ತುಳುನಾಡಿನ ಇತರ ಬಾಷೆಗಳ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಬೊಂಬಾಯಿಡ್ ತುಳುನಾಡ್ ಸಮಿತಿಯ ಉಪ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಲತೇಶ್ ಪೂಜಾರಿ, ಜಗದೀಶ್ ರಾವ್, ಪ್ರಥ್ವಿರಾಜ್ ಮುಂಡ್ಕೂರ್, ಅಶೋಕ್ ಶೆಟ್ಟಿ, ಉತ್ತಮ್ ಶೆಟ್ಟಿಗಾರ್, ದಿವ್ಯಾ ಶೆಟ್ಟಿಗಾರ್, ಪ್ರೇಮನಾಥ್ ಕೋಟ್ಯಾನ್, ಪ್ರೇಮನಾಥ ಶೆಟ್ಟಿ ಕೊಂಡಾಡಿ, ರಜಿತ್ ಸುವರ್ಣ, ಕುಶಲ್ ಶೆಟ್ಟಿ, ಲಕ್ಷ್ಮಣ್ ಕಾಂಚನ್, ಶ್ಯಾಮ್ ಸುಂದರ್ ಸಾಲ್ಯಾನ್, ಸುಧಾ ಶೆಟ್ಟಿ, ರೂಪಾ ಮೂಲ್ಯ, ಜಯಾನಂದ ಶೆಟ್ಟಿ, ಅಶೋಕ್ ಶೆಟ್ಟಿ ಮುಂಡ್ಕೂರು, ಜಯಂತಿ ದೇವಾಡಿಗ ಹಾಗೂ ಕಲಾ ಜಗತ್ತು, ಮುಂಬಯಿ ಯ ಎಲ್ಲಾ ಸದಸ್ಯರುಗಳು ಮತ್ತು ಅಭಿಮಾನಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಈಶ್ವರ ಎಂ. ಐಲ್

Comments are closed.