ಕರಾವಳಿ

ಕಾಡುಗಳ್ಳರ ಮೇಲಿಲ್ಲದ ಕಾನೂನು ಕ್ರಮ, ಮುಗ್ದ ಕೊರಗ ಸಮುದಾಯದ ಮೇಲ್ಯಾಕೆ?: ದಲಿತರ ಆಕ್ರೋಷ

Pinterest LinkedIn Tumblr

ಕುಂದಾಪುರ: ಆಮೆ ಹಾಗೂ ಕೂಮಾಗಳನ್ನು ಹಿಡಿದಿದ್ದರೆಂದು ಆರೋಪಿಸಿ ಕೊರಗ ಸಮುದಾಯದ ಅಪ್ರಾಪ್ತ ಬಾಲಕ ಸಹಿತ ಮೂವರನ್ನು ಬಂಧಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕೇಸು ದಾಖಲಿಸಿ ಸ್ಲೇಟ್ ನೀಡಿ ಅಪರಾಧಿಗಳಂತೆ ನಡೆಸಿಕೊಳ್ಳಲಾಗಿದೆ. ಮುಗ್ಧರಾದ ಕೊರಗ ಸಮುದಾಯದವರಿಗೆ ಅರಿವು ಮೂಡಿಸುವ ಕೆಲಸ ಆಗಬೇಕೆ ಹೊರತು ಅವರನ್ನು ಬೆದರಿಸಿ ಸಮಾಜದಿಂದ ಇನ್ನಷ್ಟು ದೂರವಾಗುವಂತೆ ವರ್ತಿಸಬಾರದು. ಕೊರಗ ಸಮುದಾಯದವರ ಮೇಲೆ ಕೇಸು ದಾಖಲಿಸಿದ ಕೊಲ್ಲೂರು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳನ್ನು ತತ್‌ಕ್ಷಣ ಅಮಾನತುಗೊಳಿಸಬೇಕು ಎಂದು ದಲಿತ ಮುಖಂಡರು ಒಕ್ಕೋರಲಾಗಿ ಆಗ್ರಹಿಸಿದ್ದಾರೆ.

ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಾಂಗದವರ ಕುಂದು ಕೊರತೆ ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಈ ಕ್ರಮದ ಬಗ್ಗೆ ಮೊದಲಿಗೆ ದಲಿತ ಮುಖಂಡ ವಾಸುದೇವ ಮುದೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಉದಯ ಕುಮಾರ್ ತಲ್ಲೂರು, ವಿ. ಪ್ರಭಾಕರ್, ರಾಜು ಬೆಟ್ಟಿನಮನೆ, ಚಂದ್ರಮ ತಲ್ಲೂರು ಇದಕ್ಕೆ ಧ್ವನಿಗೂಡಿಸಿದ್ದು ಕಾಡು ಲೂಟಿ ಮಾಡುವರನ್ನು ಬಿಟ್ಟು ಮುಗ್ದರ ಮೇಲೆ ದುರ್ವರ್ತನೆ ತೋರಿದ್ದು ಸರಿಯಲ್ಲ. ಸಭೆಗೆ ಅರಣ್ಯಾಧಿಕಾರಿಗಳು ಬರಬೇಕೆಂದು ಆಗ್ರಹಿಸಿದರು.

ಎಸ್ಸಿ-ಎಸ್ಟಿ ಅನುದಾನ ಕುಂದಾಪುರ ತಾಲೂಕಿನಲ್ಲಿ ದುರ್ಬಳಕೆಯಾಗುವುದನ್ನು ತಪ್ಪಿಸಬೇಕು, ಕ್ರಮಬದ್ಧವಾಗಿ ದಲಿತ ಕುಂದುಕೊರತೆ ಸಭೆ ನಡೆಯಬೇಕು, ಮತ್ತು ಬೈಂದೂರಿನಲ್ಲಿ ಅಂಬೇಡ್ಕರ್ ಭವನವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದು ಅದನ್ನು ಸುವ್ಯವಸ್ಥಿತಗೊಳಿಸುವಲ್ಲಿ ಜವಬ್ದಾರಿ ತೆಗೆದುಕೊಳ್ಳಬೇಕೆಂದು ದಲಿತ ಮುಖಂಡ ರಾಜು ಬೆಟ್ಟಿನಮನೆ ಸಭೆಯಲ್ಲಿ ಆಗ್ರಹಿಸಿದರು. ಕುಂದಾಪುರದಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ಸಮರ್ಪಕವಾದ ಕೆಲಸ ಮಾಡದಿರುವುದಕ್ಕೆ ದಲಿತರ ಸಮಸ್ಯೆಗಳು ನಿವಾರಣೆಯಾಗುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇದ್ದಲ್ಲಿ ಅಂತವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣವನ್ನ್ಯಾಕೆ ದಾಖಲಿಸಬಾರದು ಎಂದು ಮೋಹನಚಂದ್ರ ಕಾಳಾವರ ಪ್ರಶ್ನಿಸಿದರು.

ಕುಂದಾಪುರ ತಾಲೂಕು ಪಂಚಾಯತಿಗೆ ಸಂಬಂಧಿಸಿದ ವಾಣಿಜ್ಯ ಸಂಕೀರ್ಣದ ಅಂಗಡಿ ಕೋಣೆಗಳನ್ನು ಎಸ್ಸಿ-ಎಸ್ಟಿ ಮೀಸಲಾತಿಯಿದ್ದರೂ ಕೂಡ ನೀಡದೇ ಹಲವು ವರ್ಷಗಳಿಂದ ಅವರವರೇ ಪಡೆದುಕೊಳ್ಳುತ್ತಿದ್ದು ಇದರಲ್ಲಿ ಬಾರೀ ಅವ್ಯವಹಾರವಾಗುತ್ತಿದೆ ಎಂದು ಕೊರಗ ಮುಖಂಡ ಗಣೇಶ್ ಕೊರಗ ಆರೋಪಿಸಿದರು. ಪುರಸಭಾ ಸದಸ್ಯ ವಿ. ಪ್ರಭಾಕರ್ ಮಾತನಾಡಿ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಬಹಳ ವರ್ಷಗಳಿಂದಲೂ ಕೊರಗ ಸಮುದಾಯದವರು ವಾಸ ಮಾಡುತ್ತಿದ್ದು, ಆದರೆ ಅವರಿಗೆ ಮನೆ ಕಟ್ಟಿಕೊಳ್ಳಲು ಕನಿಷ್ಠ ೫-೫ ಸೆಂಟ್ಸ್ ಜಾಗ ನೀಡಿ ಎಂದು ಮನವಿ ಮಾಡಿದ್ದಕ್ಕೆ, ಉತ್ತರಿಸಿದ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪುರಸಭಾ ವ್ಯಾಪ್ತಿಯಲ್ಲಿ ಎಲ್ಲೋ ಸರಕಾರಿ ಜಾಗವಿಲ್ಲ. ಖಾಸಗಿ ಜಾಗ ಖರೀದಿಸಿ ನೀಡುವುದು ದುಬಾರಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಮೀನುಗಾರರಾಗಿದ್ದರೂ ಎಸ್ಸಿ- ಎಸ್ಟಿ ಸಮುದಾಯದವರಿಗೆ ಗಂಗೊಳ್ಳಿ ಮತ್ತು ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘಗಳಲ್ಲಿ ಎ- ದರ್ಜೆ ಸದಸ್ಯತ್ವ ನೀಡುತ್ತಿಲ್ಲ. ದಲಿತರು ಸಹಕಾರಿ ರಂಗದ ಚುನಾವಣೆಗೆ ನಿಲ್ಲಬಾರದು ಅವರು ಮೇಲ್ಸ್ತರಕ್ಕೆ ಬರಬಾರೆನ್ನುವ ಹುನ್ನಾರ ಇದು ಎಂದು ಮುಖಂಡರಾದ ಉದಯ ಕುಮಾರ್ ತಲ್ಲೂರು, ಚಂದ್ರಮ ತಲ್ಲೂರು, ಮತ್ತಿತರರು ಆರೋಪಿಸಿದ್ದಲ್ಲದೆ, ಇದಕ್ಕೆ ಉತ್ತರಿಸಬೇಕಾದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಗೈರಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್ಸಿ – ಎಸ್ಟಿ ಸಮುದಾಯದವರಿಗೆ ಕೈಗಾರಿಕೆ, ಉದ್ಯಮ ಮಾಡಲು ಕೋಳಿ ಸಾಕಣೆ ಇತ್ಯಾದಿಗೆ ಸಾಲ ಸಿಕ್ಕರೂ, ಜಾಗ ಮಂಜೂರಾಗುತ್ತಿಲ್ಲ. ಕನ್ವರ್ಶನ್ ಆಗುತ್ತಿಲ್ಲ ಎನ್ನುವುದಾಗಿ ಮುಖಂಡರಾದ ಗೋಪಾಲ್ ಕಳಿಂಜೆ ಹಾಗೂ ವಾಸುದೇವ ಮುದೂರು ಪ್ರಸ್ತಾಪಿಸಿದರು.

ಬೈಂದೂರು ತಾ.ಪಂ. ಕಾರ್‍ಯನಿರ್ವಾಹಣಾಧಿಕಾರಿ ಭಾರತಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೆಕರ್ ಕಾರ್‍ಯಕ್ರಮ ನಿರ್ವಹಿಸಿದರು. ಇಲಾಖೆಯ ರಮೇಶ್ ಪಾಲನಾ ವರದಿ ವಾಚಿಸಿದರು.

ಕುಡಿಯಲು ನೀರಿಲ್ಲ…..
ತಮಗೆ ಅರ್ಧ ಎಕರೆ ಜಾಗವಿದ್ದು, ಆದರೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬಾವಿಗೆ ಅನುದಾನ ಸಿಗುತ್ತಿಲ್ಲ. ಕನಿಷ್ಠ ಒಂದು ಎಕರೆ ಜಾಗವಿರಬೇಕು ಎಂದು ಪಂಚಾಯತ್ ಹೇಳುತ್ತದೆ. ಆದರೆ ನನಗೆ ಕುಡಿಯಲು ನೀರಿಲ್ಲ. ನಾನೇನು ಮಾಡಲಿ ಎಂದು ಕೆರಾಡಿಯ ಗ್ರಾಮಸ್ಥರೊಬ್ಬರು ಪ್ರಶ್ನಿಸಿದರು. ಇದಕ್ಕೆ ಕುಂದಾಪುರ ತಾ.ಪಂ. ಕಾರ್‍ಯನಿರ್ವಾಹಣಾಧಿಕಾರಿ ಕೇಶವ ಶೆಟ್ಟಿಗಾರ್ ಪ್ರತಿಕ್ರಿಯಿಸಿ ಪಂಚಾಯತ್‌ಗೆ ಮನವಿ ಕೊಡಿ. ಅಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಬಾವಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

Comments are closed.