ಕರಾವಳಿ

‘ಪರ್ಯಾಯ ದರ್ಬಾರ್’- ಶ್ರೀಕೃಷ್ಣನ ಚಿಂತನೆ ಅಳವಡಿಸಿಕೊಳ್ಳೋಣ: ಶ್ರೀ ಈಶಪ್ರಿಯತೀರ್ಥರು

Pinterest LinkedIn Tumblr

ಉಡುಪಿ: ಉಡುಪಿಯ ಪರ್ಯಾಯ ನಾಡಿನ ಉತ್ಸವ ಆಗುತ್ತಿದೆ. ಶ್ರೀಕೃಷ್ಣ ಸೇವಾ ಬಳಗ, ಜಿಲ್ಲಾಡಳಿತ, ವಿವಿಧ ಇಲಾಖೆಗಳು ಕೈಜೋಡಿಸಿದ್ದರಿಂದ ಯಶಸ್ಸನ್ನು ಕಂಡಿದೆ. ಮುಂದಿನ ಎರಡು ವರ್ಷವೂ ಕೂಡ ಉತ್ತಮ ಕಾರ್ಯಗಳು ಅನುಷ್ಟಾನಕ್ಕೆ ಬರಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಪರ್ಯಾಯ ದರ್ಬಾರ್‌ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಶ್ರೀಕೃಷ್ಣನ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಉತ್ತಮ ಕೆಲಸ ವಾಗಬೇಕಾದರೆ, ಸಮಾಜ ಸುಭಿಕ್ಷೆ ಯಾಗಬೇಕಾದರೆ ಪ್ರತಿಯೊಬ್ಬರಲ್ಲೂ ಸತ್‌ ಚಿಂತನೆ ಸದಾ ಜಾಗೃತಗೊಂಡಿರಬೇಕು. ತಮ್ಮ ಪರ್ಯಾಯಾವಧಿಯಲ್ಲಿ ಸಮಾಜಹಿತಕ್ಕಾಗಿ ಆಯೋಜಿಸಿರುವ ವಿವಿಧ ಯೋಜನೆಗಳಾದ ಪ್ಲಾಸ್ಟಿಕ್ ಬಳಕೆ ನಿಷೇಧ, ಸಾವಯವ ಕೃಷಿಗೆ ಪ್ರೋತ್ಸಾಹ, ಸ್ವಚ್ಛತೆಗೆ ಆದ್ಯತೆ, ಯುವಜನತೆಗೆ ಧರ್ಮದ ತಿಳಿವಳಿಕೆ ಇತ್ಯಾದಿ ಯೋಜಿತ ಯೋಜನೆಗಳ ಈಡೇರಿಕೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ನಿರ್ಗಮನ ಪೀಠಾದೀಶರಾದ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಾತನಾಡಿ, ಭಗವಂತ ಮತ್ತು ಗುರುಗಳ ಅನುಗ್ರಹವಿದ್ದರೆ ಎಲ್ಲ ಕಾರ್ಯ ಸಾಧ್ಯ ಎಂದರು. ಪಲಿಮಾರು ಕಿರಿಯ ಸ್ವಾಮೀಜಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮತ್ತು ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಆಚಾರ್ಯ ಮಧ್ವಪ್ರಣೀತ ತತ್ವ ಪರಿಪಾಲನೆಯಿಂದ ಸಮಾಜ ಸುಭಿಕ್ಷೆ ಸಾಧ್ಯ. ಈ ನಿಟ್ಟಿನಲ್ಲಿ ಪರಿಸರಸಹ್ಯ ಯೋಜನೆಗಳನ್ನು ರೂಪಿಸಿರುವ ಅದಮಾರು ಶ್ರೀಗಳ ನಾಯಕತ್ವ ಸಮಾಜ ಬದಲಾವಣೆಗೆ ಅಗತ್ಯ ಎಂದರು. ಚಿಕ್ಕಂದಿನಿಂದಲೂ ಉಡುಪಿಯ ಈ ಮಟ್ಟದ ಪ್ರಭಾವ ತಮ್ಮ ಮೇಲೆ ಕಾಣಿಸಿಕೊಂಡಿದ್ದು, ಹಲವಾರು ಬಾರಿ ಬಂದು ಕೃಷ್ಣನ ದರ್ಶನ ಮಾಡಿದ್ದೇನೆ. 16ವರ್ಷಗಳ ಹಿಂದೆ ಅದಮಾರು ಮಠದ ಪರ್ಯಾಯ ನಡೆದಿದ್ದಾಗ ನಾನು ಉಡುಪಿಗೆ ಬಂದು ಅವರ ಆಶೀರ್ವಾದ ಪಡೆದಿದ್ದೆ. ಕಳೆದ ಸಪ್ಟೆಂಬರ್ ತಿಂಗಳಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೊಸದಿಲ್ಲಿಯ ನನ್ನ ಮನೆಗೆ ಬಂದು ಹರಿಸಿರುವುದು ನನಗೆ ಮರೆಯಲಾಗದ ಅನುಭವ ಎಂದರು.

ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ, ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಭೀಮಾ ಜ್ಯುವೆಲ್ಲರ್ಸ್ನ ವಿಷ್ಣುಶರಣ್ ಕೆ. ಭಟ್, ಬ್ಯಾಂಕ್ ಆಫ್ ಬರೋಡಾ ಆಡಳಿತ ನಿರ್ದೇಶಕ ಮುರಳಿ ರಾಮಸ್ವಾಮಿ, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ. ಎಸ್. ಮೊದಲಾದವರಿದ್ದರು.

ಈ ಸಂದರ್ಭದಲ್ಲಿ 22 ಮಂದಿಗೆ ಕೃಷ್ಣಾನುಗ್ರಹ ಪ್ರಶಸ್ತಿ ನೀಡಲಾಯಿತು. ವಿವಿಧ ಕ್ಷೇತ್ರಗಳಾದ ತಿರುಪತಿ, ಶ್ರೀರಂಗಂ, ಭದ್ರಾಚಲ, ಮಂತ್ರಾಲಯ, ಉತ್ತರಾದಿಮಠ ಮೊದಲಾದೆಡೆಗಳ ಪ್ರಸಾದ ಸಮರ್ಪಣೆ ನಡೆಯಿತು. ಬಳಿಕ ಅಧಿಕಾರಿಗಳ ಘೋಷಣೆ ನಡೆಸಲಾಯಿತು.

Comments are closed.