ಕರಾವಳಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಬೃಹತ್ ಪ್ರತಿಭಟನೆ : ಧರ್ಮದ ಆಧಾರದಲ್ಲಿ ವಿಭಜಿಸುವ ಕಾನೂನಿಗೆ ನಮ್ಮ ಸಹಮತವಿಲ್ಲ ಎಂದ ಹರ್ಷ ಮಂದರ್

Pinterest LinkedIn Tumblr

ಮಂಗಳೂರು, ಜನವರಿ. 15: ಕೇಂದ್ರ ಸರಕಾರವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ‘ದಿ ಮುಸ್ಲಿಂ ಸೆಂಟ್ರಲ್ ಕಮಿಟಿ’ಯ ನೇತೃತ್ವದಲ್ಲಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಇಂದು  ಅಪರಾಹ್ನ ನಗರದ ಅಡ್ಯಾರ್‌ ಕಣ್ಣೂರು ರಾಷ್ಟ್ರೀಯ ಹೆದ್ದಾರಿ ಬಳಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.

ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ವಿಶ್ರಾಂತ ಐಎಎಸ್ ಅಧಿಕಾರಿ, ‘ವಿ ದಿ. ಪೀಪಲ್ ಆಫ್ ಇಂಡಿಯಾ’ ಪ್ರತಿನಿಧಿ ಹರ್ಷ ಮಂದರ್ ಅವರು, ನಮ್ಮದು ಗಾಂಧೀಜಿ, ಅಂಬೇಡ್ಕರ್, ಮೌಲಾನಾ ಆಝಾದ್, ನೇತಾಜಿಯವರ ಮಾನವತೆಯ ಭಾರತ. ನಮ್ಮ ಸಂವಿಧಾನ ಹೇಳುವಂತೆ ಎಲ್ಲರಿಗೂ ಇಲ್ಲಿ ಜೀವಿಸಲು ಸಮಾನವಾದ ಹಕ್ಕಿದೆ. ಭಾರತೀಯರಾದ ನಮ್ಮನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಕಾನೂನಿಗೆ ನಮ್ಮ ಸಹಮತವಿಲ್ಲ ಎಂದು ತಿಳಿಸಿದರು.

1925ರಲ್ಲಿಯೇ ಈ ಹೋರಾಟ ಆರ್‌ಎಸ್‌ಎಸ್ ಸಂಘಟನೆಯ ಅಸ್ತಿತ್ವದೊಂದಿಗೆ ಆರಂಭಗೊಂಡಿತ್ತು. ಹಿಂದೂ ಮಹಾಸಭಾ ಸೇರಿದಂತೆ ಆ ಬಳಿಕ ಹಲವು ಸಂಘ ಸಂಸ್ಥೆಗಳು ಹಿಂದೂಸ್ತಾನವನ್ನು ಹಿಂದೂರಾಷ್ಟ್ರವನ್ನಾಗಿಸುವ ಷಡ್ಯಂತ್ರಕ್ಕೆ ಬೆಂಬಲ ಸೂಚಿಸಿದವು. ಬ್ರಿಟಿಷರ ವಿರುದ್ಧ ಅಸಹಕಾರ, ಅಹಿಂಸಾ ಚಳವಳಿಯ ಮೂಲಕ ಸ್ವಾತಂತ್ರ ಹೋರಾಟದ ನೇತೃತ್ವ ವಹಿಸಿದ್ದ ಮಹಾತ್ಮಾ ಗಾಂಧೀಜಿ ಕಲ್ಪನೆಯ ಭಾರತದಲ್ಲಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಸಂವಿಧಾನದ ಆಶಯಗಳಲ್ಲಿ ಈ ಸಂಘಟನೆಗಳಿಗೆ ಸಹಮತವಿರಲಿಲ್ಲ. ಇದು ಕೇವಲ ಹಿಂದೂಗಳ ದೇಶ ಎಂಬುದೇ ಅವರ ವಾದ. ಸಮಸ್ತರ ಹಿಂದೂಸ್ತಾನವನ್ನು ಹಿಂದೂಗಳ ರಾಷ್ಟ್ರವನ್ನಾಗಿಸಬೇಕೆಂಬ ಹುನ್ನಾರವೇ ಈ ಕಾನೂನುಗಳ ಜಾರಿಗೊಳಿಸುವ ಪ್ರಯತ್ನ ಎಂದು ಸಿಎಎ ಹಾಗೂ ಎನ್‌ಆರ್‌ಸಿ ತಿದ್ದುಪಡಿ ಬಗ್ಗೆ ಅವರು ವಿರೋಧ ವ್ಯಕ್ತಪಡಿಸಿದರು.

ಈ ಸಮರ ಎಷ್ಟು ದಿನ ಮುಂದುವರಿಯಲಿದೆ ಗೊತ್ತಿಲ್ಲ. ಆದರೆ ನಾವು ದಾಖಲೆ ನೀಡುವುದಿಲ್ಲ ಎಂಬುದರ ಜತೆಗೆ ನಾವು ಧರ್ಮಾತೀತ ವಾಗಿ ಒಂದಾಗಬೇಕಿದೆ. ಇದುವೇ ನಮ್ಮ ಹೋರಾಟದ ಅಸ್ತ್ರ ಎಂದು ಹರ್ಷ ಮಂದರ್ ಅಭಿಪ್ರಾಯಿಸಿದರು.

ಮಧ್ಯಾಹ್ನ 2.30ಕ್ಕೆ ಆರಂಭಗೊಂಡ ಸಮಾವೇಶ ಸಂಜೆ 6.30ಕ್ಕೆ ಸಮಾರೋಪಗೊಂಡಿತು. ಸಮಾವೇಶದಲ್ಲಿ ನೂರಾರು ಗಣ್ಯರು ಭಾಗವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದವರು, ಕಾಯ್ದೆಯ ಆಗುಹೋಗುಗಳ ಬಗ್ಗೆ ಜಾಗೃತಿ ಮೂಡಿಸಿದರು.

ರಾಷ್ಟ್ರಧ್ವಜಕ್ಕೆ ಮಾತ್ರ ಅವಕಾಶ :

ಒಂದು ಕೈಯಲ್ಲಿ ರಾಷ್ಟ್ರಧ್ವಜ, ಮತ್ತೂಂದರಲ್ಲಿ ಸಂವಿಧಾನ, ಮನದಲ್ಲಿ ಅಹಿಂಸೆ, ಬಾಯಲ್ಲಿ ಜನಗಣ ಮನ ಇದು ಸಮಾವೇಶದ ಧ್ಯೇಯವಾಕ್ಯ. ಸಮಾವೇಶದಲ್ಲಿ ಭಾಗವಹಿಸುವವರು ರಾಷ್ಟ್ರಧ್ವಜ ಮತ್ತು ಮುಸ್ಲಿಮ್‌ ಸೆಂಟ್ರಲ್‌ ಕಮಿಟಿ ಸಿದ್ಧಪಡಿಸಿರುವ ಪ್ಲಕಾರ್ಡ್‌, ಘೋಷಣೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಯಾವುದೇ ಪಕ್ಷ, ಸಂಘಟನೆಯ ಧ್ವಜ, ಘೋಷಣೆಗಳಿಗೆ ಅವಕಾಶವಿರಲಿಲ್ಲ. ಸಮಾವೇಶದಲ್ಲಿ ಭಾಗವಹಿಸುವವರು ಶಾಂತಿ, ಸಂಯಮ ಪಾಲಿಸಬೇಕು ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮೊದಲೇ ಸೂಚಿಸಲಾಗಿತ್ತು.

ಖಾಝಿಗಳಾದ ಅಲ್‌ಹಾಜ್ ತ್ವಾಕಾ ಅಹ್ಮದ್‌ ಮುಸ್ಲಿಯಾರ್, ಅಲ್‌ಹಾಜ್ ಬೇಕಲ ಇಬ್ರಾಹಿಂ ಮುಸ್ಲಿಯಾರ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಶಾಸಕ ಯುಟಿ ಖಾದರ್, ಮಾಜಿ ಶಾಸಕ ಮೊಯ್ದಿನ್‌ ಬಾವಾ, ಜೆ.ಆರ್. ಲೋಬೊ, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ರಶೀದ್ ಝೈನಿ, ಸಮಸ್ತ ಮುಶಾವರ ರಾಜ್ಯ ಕಾರ್ಯದರ್ಶಿ ಯುಕೆ ಅಬ್ದುಲ್ ಅಝೀಝ್ ದಾರಿಮಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಎಸ್‌ಕೆಎಸ್‌ಎಂ ದಾವಾ‌ ಕಾರ್ಯದರ್ಶಿ ಎಂಜಿ ಮುಹಮ್ಮದ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮತ್ತಿತರರು ಭಾಗವಹಿಸಿದ್ದರು.

ಇನ್ನು ಜನ ಜಾಗೃತಿ ಸಮಾವೇಶಕ್ಕೆ ಎಸ್‌ಡಿಪಿಐ, ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನಿ ಯುವ ಜನ ಸಂಘ,ಸುನ್ನಿ ಕೋ ಆರ್ಡಿನೇಶನ್, ಕುದ್ರೋಳಿಯ ಕಸಾಯಿ ಖಾನೆಯ ಸಂಘಟನೆಯಾದ ಕುದ್ರೋಳಿ ಜಮೀಯ್ಯತುಸ್ಸಅದಾ ಸಂಘಟನೆ ಹಾಗೂ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ಸಂಪೂರ್ಣ ಬೆಂಬಲ ಘೋಷಿಸಿತ್ತು. ಸಮಾವೇಶದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು ಸೇರಿದಂತೆ ಎಲ್ಲಾ ಕಾರ್ಪೋರೇಟರ್ ಗಳು, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು, ಪಕ್ಷದ ಮುಖಂಡರು, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್.ಎಸ್.ಯು.ಐ ಘಟಕ, ಸೇವಾದಳ, ಅಲ್ಪಸಂಖ್ಯಾತ ವಿಭಾಗ ಹಾಗೂ ಪಕ್ಷದ ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಸಮಾವೇಶ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ :

ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂದೋಬಸ್ತ್ಗಾಗಿ 4 ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಮೂರು ಕೇಂದ್ರೀಯ ಅರೆಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿಯ್ಯು.. ರ್ಯಾಪಿಡ್‌ ಇಂಟರ್‌ವೆನ್ಶನ್‌ ವಾಹನ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿಯ್ಯು. ಸಮಾವೇಶ ನಡೆಯುವ ಮೈದಾನ ಮತ್ತು ಸುತ್ತಲಿನ ಪ್ರದೇಶದಲ್ಲಿಯೇ 2 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿಯುತ್ತು..ನಗರದ ಆಯಕಟ್ಟಿನ ಪ್ರದೇಶಗಳಲ್ಲಿಯೂ ಭದ್ರತೆ ಏರ್ಪಡಿಸಲಾಗಿತ್ತು.

ಪ್ರತಿಭಟನಾ ಸಮಾವೇಶದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚ ರಿಕೆ ಕ್ರಮವಾಗಿ ಎಡಿಜಿಪಿ, ಐಜಿಪಿ, 11 ಎಸ್ಪಿ, 18 ಎಎಸ್ಪಿ, 100 ಡಿವೈಎಸ್ಪಿ, 300 ಇನ್‌ಸ್ಪೆಕ್ಟರ್, 500 ಎಸ್ಸೈ ಸಹಿತ 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ಪೊಲೀಸ್ ಮೈದಾನದಲ್ಲಿ ಭದ್ರತೆಗಾಗಿ ಹೊರ ಜಿಲ್ಲೆಗಳಿಂದ ಆಗಮಿಸಿದ ಪೊಲೀಸ್ ಅಧಿಕಾರಿಗಳ ರೋಲ್ ಕಾಲ್ ಪರೇಡ್ ನಡೆಸಲಾಗಿತ್ತು. ನಗರದ ವಿವಿಧ ಕಡೆ ರ್ಯಾಪಿಡ್ ಆಯಕ್ಷನ್ ಫೋರ್ಸ್ ಸಿಬ್ಬಂದಿ ಪಥಸಂಚಲನ ನಡೆಸಿದ್ದಾರೆ. ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿಯೂ ಆಗಮಿಸಿದ್ದರು.

ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಮಂಗಳವಾರ ಸಭೆ ನಡೆಸಿದ್ದರು. ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ, ಅಗ್ನಿಶಾಮಕ, ಆ್ಯಂಬುಲೆನ್ಸ್‌ ಸೇರಿದಂತೆ ಅಗತ್ಯ ತುರ್ತು ವಾಹನಗಳನ್ನು ನಿಯೋಜಿಸಲು ಮೊದಲೇ ಸೂಚಿಸಿದ್ದರು.

Comments are closed.