ಕರಾವಳಿ

ಭಾಷೆ – ಭಾವಗಳ ಸಮನ್ವಯತೆ ಕಾವ್ಯ: ರತ್ನೋತ್ಸವದಲ್ಲಿ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ

Pinterest LinkedIn Tumblr

ಮಂಗಳೂರು: ‘ ಕಾವ್ಯ ಹೃದಯದ ಭಾವನೆಗಳ ಅಭಿವ್ಯಕ್ತಿ; ಅದಕ್ಕೆ ಭಾಷೆಯ ಬಂಧನವಿಲ್ಲ .ಪ್ರಪಂಚದ ಆಗುಹೋಗುಗಳನ್ನು ಬೆರಗುಗಣ್ಣುಗಳಿಂದ ಕಂಡು ಅವುಗಳ ಯಥಾರ್ಥತೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಅಕ್ಷರ ರೂಪ ಕೊಡುವವನು ಕವಿ. ಭಾಷೆ ಯಾವುದೇ ಇರಲಿ ಆ ಭಾಷೆ ಮತ್ತು ತಾನು ಕಂಡರಸಿದ ಭಾವಗಳ ನಡುವೆ ಸಮನ್ವಯತೆಯನ್ನು ಸಾಧಿಸುವುದೇ ನಿಜಾರ್ಥದ ಕಾವ್ಯ’ ಎಂದು ಕವಿ – ಕಲಾವಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ದೇರಳಕಟ್ಟೆ ಗ್ರೀನ್ ಗ್ರೌಂಡ್ ನ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಭಾಂಗಣದ ವಿದ್ವಾನ್ ರಾಮಚಂದ್ರ ಉಚ್ಚಿಲ್ ವೇದಿಕೆಯಲ್ಲಿ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲಾ ವತಿಯಿಂದ ಜರಗಿದ ಕನ್ನಡ ನಾಡು ನುಡಿ ವೈಭವದ ‘ ರತ್ನೋತ್ಸವ ‘ ಕರಾವಳಿ ಕರ್ನಾಟಕದ ಸಾಹಿತ್ಯ – ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘

ಕಾವ್ಯ ಮನಸ್ಸುಗಳನ್ನು ಅರಳಿಸುವ ಮಾಧ್ಯಮ. ಆತುರದಿಂದ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿ ಆ ಮಾಧ್ಯಮವನ್ನು ದುರ್ಬಳಕೆ ಮಾಡಬಾರದು. ಯಾವುದೇ ವಸ್ತುವನ್ನು ಆಯ್ದು ಕವಿತೆಗಳನ್ನು ಹೊಸೆಯುವಾಗ ಅವುಗಳಿಂದ ಸಮುದಾಯದ ಭಾವನೆಗಳಿಗೆ ನೋವಾಗದಂತೆ ಎಚ್ಚರ ವಹಿಸುವುದು ಕವಿಗಳ ಹೊಣೆ’ ಎಂದವರು ನುಡಿದರು.

ಗೋಷ್ಠಿಯಲ್ಲಿ ಕವಿಗಳಾದ ಮಹಮ್ಮದ್ ಬಡ್ಡೂರು, ಮಹೇಂದ್ರನಾಥ ಸಾಲೆತ್ತೂರು (ತುಳು); ವಿಜಯಲಕ್ಷ್ಮಿ ಪ್ರಸಾದ್ ರೈ, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ (ಕನ್ನಡ); ಗುಣಾಜೆ ರಾಮಚಂದ್ರ ಭಟ್ , ಅಕ್ಷತಾ ರಾಜ್ ಪೆರ್ಲ (ಹವ್ಯಕ); ಹಂಝ ಮಲಾರ್ (ಬ್ಯಾರಿ); ಎಡ್ವರ್ಡ್ ಲೋಬೋ ತೊಕ್ಕೊಟ್ಟು (ಕೊಂಕಣಿ)‌; ಎಂ.ನಾ.ಚಂಬಲ್ತಿಮಾರ್ (ಮಲೆಯಾಲಂ) ಮತ್ತು ಪ್ರವೀಣ್ ಅಮ್ಮೆಂಬಳ (ತಮಿಳು)- ವಿವಿಧ ಭಾಷೆಗಳಲ್ಲಿ ಸ್ವರಚಿತ ಕವನಗಳನ್ನು ಮಂಡಿಸಿದರು.

ದೇರಳಕಟ್ಟೆ ರತ್ನ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು; ಕಾರ್ಯದರ್ಶಿ ಸೌಮ್ಯಾ ಆರ್. ಶೆಟ್ಟಿ ವಂದಿಸಿದರು. ಗೌರವ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Comments are closed.