ಕರಾವಳಿ

ಪೌರತ್ವ ಕಾಯ್ದೆಯ ಹೆಸರಿನಲ್ಲಿ ಕಾಂಗ್ರೇಸ್ ಬೆಂಕಿ ಹಚ್ಚುತ್ತಿದೆ : ಶಾಸಕ ಕಾಮತ್ ಆರೋಪ

Pinterest LinkedIn Tumblr

ಮಂಗಳೂರು : ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಪೌರತ್ವ ಕಾಯ್ದೆ ಬೆಂಬಲಿಸಿ ಪೋಸ್ಟ್ ಕಾರ್ಡ್, ಸಹಿ ಸಂಗ್ರಹ ಅಭಿಯಾನಕ್ಕೆ ಮಂಗಳಾದೇವಿ ದೇವಸ್ಥಾನದ ಬಳಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಚಾಲನೆ ನೀಡಿದರು.

ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಕೈಗೊಂಡಿರುವ ಈ ಕಾಯ್ದೆಯಿಂದ ಇಲ್ಲಿನ ಮೂಲ ನಿವಾಸಿಗಳಿಗೆ ಏನೂ ಸಮಸ್ಯೆಯಾಗುವುದಿಲ್ಲ. ಆದರೆ ಅರೆ ಪಕ್ವ ಕಾಂಗ್ರೇಸ್ ನಾಯಕರು ಕಾಯ್ದೆಯ ಕುರಿತು ಅರಿಯದೆ ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಠಿಸುತ್ತಿದ್ದು, ಪೌರತ್ವ ಕಾಯ್ದೆಯ ಹೆಸರಿನಲ್ಲಿ ಕಾಂಗ್ರೇಸ್ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಶಾಸಕ ಕಾಮತ್ ಆರೋಪಿಸಿದ್ದಾರೆ.

ಪಾಕ್,ಬಾಂಗ್ಲಾ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿರುವ ಹಿಂದೂ,ಸಿಖ್,ಜೈನ,ಪಾರ್ಸಿ ಹಾಗೂ ಕ್ರೈಸ್ತ ಸಮುದಾಯದವರಿಗೆ ಭಾರತದಲ್ಲಿ ಬದುಕಲು ಪೌರತ್ವ ನೀಡುವುದು ಈ ಕಾಯ್ದೆಯ ಉದ್ದೇಶವಾಗಿದೆ. ಆದರೆ ಎಲ್ಲಾ ಹಂತದಲ್ಲೂ ವೈಫಲ್ಯ ಕಂಡಿರುವ ಕಾಂಗ್ರೇಸ್ ಪಕ್ಷವು ಅಲ್ಪ ಸಂಖ್ಯಾತರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಲು ಪುಕಾರೆಬ್ಬಿಸುತ್ತಿದೆ. ಈ ಹಿಂದೆ ಕಾಂಗ್ರೇಸಿನ ಅಗ್ರಗಣ್ಯ ನಾಯಕರೆಲ್ಲರೂ ಪೌರತ್ವ ಕಾಯ್ದೆಯನ್ನು ತಿದ್ದುಪಡಿಗೊಳಿಸಬೇಕೆಂದು ಹೇಳಿರುವುದನ್ನು ಕಾಂಗ್ರೇಸಿಗರು ಮರೆತಿರಬಹುದು ಆದರೆ ಭಾರತೀಯರು ಮರೆಯುವುದಿಲ್ಲ ಎಂದಿದ್ದಾರೆ.

ಇಂತಹ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರನ್ನು ಅಭಿನಂಧಿಸಲೇಬೇಕು. ಹಾಗೂ ಕಾಯ್ದೆಯನ್ನು ಬೆಂಬಲಿಸಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಪೋಸ್ಟ್ ಕಾರ್ಡ್ ಅಭಿಯಾನದ ಮೂಲಕ ಕೇಂದ್ರ ಸರಕಾರದ ನಿರ್ಧಾರವನ್ನು ಬೆಂಬಲಿಸಲಿದ್ದೇವೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದರು.

Comments are closed.