ಕರಾವಳಿ

ಮಂಗಳೂರು ಗಲಾಭೆಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ನೇರ ಹೊಣೆ : ರೈ – ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ

Pinterest LinkedIn Tumblr

ಮಂಗಳೂರು, ಜನವರಿ.02: ಡಿ.19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್, ಘರ್ಷಣೆ ಪ್ರಕರಣದ ಕುರಿತು ನಿಷ್ಪಕ್ಷಪಾತವಾದ ತನಿಖೆ ಆಗಬೇಕಾಗಿರುವುದರಿಂದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.

ಡಿ.19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್, ಘರ್ಷಣೆ ಪ್ರಕರಣವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಇಂದು ಪುರಭವನದ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಆಯೋಜಿಸಲಾಗಿರುವ ಸಾಮೂಹಿಕ ಧರಣಿಯನ್ನು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನುಸುಳುಕೋರರು, ಭಯೋತ್ಪಾದಕರನ್ನು ಹಿಡಿಯುವ ನೆಪದಲ್ಲಿ ರಾಜ್ಯದಲ್ಲಿ ಆರು ಕೋಟಿ ಜನರನ್ನು ತನಿಖೆ ಮಾಡುವಂತಹ ಪರಿಸ್ಥಿತಿ ಈ ಪೌರತ್ವ ಸಾಬೀತು ಪಡಿಸುವ ಕಾಯ್ದೆಯಾಗಿದೆ. ಇದು ರಾಜ್ಯ, ದೇಶದ ಪ್ರಜೆಗಳಿಗೆ ಅವಮಾನ ಮಾಡುವುದು ಮಾತ್ರವಲ್ಲದೆ ಸಬ್‌ಕಾ ಸಾತ್ ಸಬ್‌ಕಾ ಸಾತ್ ಎಂದು ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಹಿಪಾಕ್ರಸಿಯ ಭಾಗ ಎಂದು ರಮಾನಾಥ ರೈ ದೂರಿದರು.

ಮಂಗಳೂರಿನಲ್ಲಿ ಡಿ. 19ರಂದು ನಡೆದ ಘಟನೆಗೆ ವಿಪಕ್ಷ ಕಾರಣ, ಪೂರ್ವನಿಯೋಜಿತ ಎಂದೆಲ್ಲಾ ರಾಜ್ಯ ಸರಕಾರ ಆರೋಪಿಸುತ್ತಿದೆ. ವಾಸ್ತವದಲ್ಲಿ ರಾಜ್ಯದಲ್ಲಿ ಯಾವುದೇ ಗಲಾಟೆ, ಗಲಭೆಗಳಿಲ್ಲವಾದರೂ ಪೂರ್ವಭಾವಿಯಾಗಿ ರಾಜ್ಯಾದ್ಯಂತ ನಿಷೇಧಾಜ್ಞೆ ಹೇರುವ ಮೂಲಕ ಸರಕಾರವೇ ಗಲಭೆಗೆ ಪ್ರಚೋದನೆ ನೀಡಿತ್ತು. ಇದು ಸರಕಾರದ ಪೂರ್ವ ನಿಯೋಜಿತ ಕೃತ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವರೇ ಇದಕ್ಕೆ ನೇರ ಹೊಣೆ ಎಂದು ರಮಾನಾಥ ರೈ ಆರೋಪಿಸಿದರು.

ಪ್ರತಿಭಟನೆಯಲ್ಲಿ ಶಾಸಕ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಕೆ.ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ, ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜೆಡಿಎಸ್ ಮುಖಂಡರಾದ ಮುಹಮ್ಮದ್ ಕುಂಞಿ, ಸುಶೀಲ್ ನೊರೊನ್ಹ, ಸಿಪಿಎಂನ ಕೆ.ಆರ್.ಶ್ರೀಯಾನ್, ಸುನೀಲ್ ಕುಮಾರ್ ಬಜಾಲ್, ಸಂತೋಷ್ ಕುಮಾರ್, ಜಯಂತಿ ಶೆಟ್ಟಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಎಂ.ದೇವದಾಸ್, ರಘು ಎಕ್ಕಾರು, ರೈತ ನಾಯಕ ರವಿಕಿರಣ ಪುಣಚ, ವಿವಿಧ ಪಕ್ಷ ಹಾಗೂ ಸಂಘಟನೆಗಳ ನಾಯಕರಾದ ಆಲ್ವಿನ್ ಮಿನೇಜಸ್, ಪ್ರೇಮನಾಥ ಶೆಟ್ಟಿ, ಯು.ಬಿ. ಲೋಕಯ್ಯ, ಬಾಲಕೃಷ್ಣ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಪ್ರವೀಣ್ ಚಂದ್ರ ಆಳ್ವ, ಕರೀಂ, ಕುಕ್ಯಾನ್, ಎ.ಸಿ. ವಿನಯರಾಜ್, ಲತೀಫ್ ಕಂದಕ್, ಭಾಸ್ಕರ್, ಸಂತೋಷ್ ಶೆಟ್ಟಿ, ಅಝೀಝ್ ಕುದ್ರೋಳಿ, ಸಂಶುದ್ದೀನ್, ಅಕ್ಷಿತ್ ಸುವರ್ಣ, ವಾಸುದೇವ ಉಚ್ಚಿಲ್, ಫಾರೂಕ್ ಉಳ್ಳಾಲ್, ಹರಿನಾಥ್, ಶಶಿಧರ ಹೆಗ್ಡೆ, ಪಿ.ವಿ.ಮೋಹನ್, ಅಹ್ಮದ್ ಬಾವಾ, ಸುಮತಿ ಹೆಗ್ಡೆ, ನಝೀರ್ ಉಳ್ಳಾಲ್, ಇಬ್ರಾಹೀಂ ಕೋಡಿಜಾಲ್, ಲ್ಯಾನ್ಸಿಲಾಟ್ ಪಿಂಟೊ, ಸುರೇಶ್ ಬಲ್ಲಾಳ್, ಮಮತಾ ಗಟ್ಟಿ, ಶ್ಯಾಲೆಟ್ ಪಿಂಟೋ, ಕವಿತಾ ಸನಿಲ್, ಎ.ಜೆ. ಸಲೀಂ, ಸದಾಶಿವ ಶೆಟ್ಟಿ, ಯಾದವ ಶೆಟ್ಟಿ, ಟಿ. ಹೊನ್ನಯ್ಯ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತಿತರರು ಪಾಲ್ಗೊಂಡಿದ್ದರು..

Comments are closed.