ಅಂತರಾಷ್ಟ್ರೀಯ

ಮಹಿಳೆಯನ್ನು ಕೊಂದಾತ ‘ನನ್ನನ್ನು ಸಾಯಿಸಿ’ ಎಂದಾಗ ಬಿತ್ತು ಪೋಲೀಸರ ಗುಂಡು !

Pinterest LinkedIn Tumblr

ಒಮಾಹ: ಹೊಸ ವರ್ಷದ ಹಿಂದಿನ ರಾತ್ರಿ ತಮ್ಮ ಪಕ್ಕದ ಫ್ಲ್ಯಾಟ್​ನಲ್ಲಿ ಗುಂಡಿನ ಸಪ್ಪಳ ಕೇಳುತ್ತಿದೆ ಎಂಬ ದೂರು ಬಂದಿದ್ದರಿಂದ ಅಪಾರ್ಟ್​ಮೆಂಟ್​ಗೆ ಹೋದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಮನೆಯೊಳಗೆ ಮಹಿಳೆಯನ್ನು ಕೊಂದಾತ ಗನ್​ ಹಿಡಿದ ಕೈಗಳನ್ನು ಮೇಲಕ್ಕೆತ್ತಿ ‘ನನ್ನನ್ನು ಸಾಯಿಸಿ’ ಎಂದು ಕಿರುಚುತ್ತಾ ಹೊರಗೆ ಬಂದಿದ್ದ. ಪೊಲೀಸರು ಆರೋಪಿಗೆ ಗುಂಡು ಹಾರಿಸಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಮೆರಿಕದ ಒಮಾಹದಲ್ಲಿ ಈ ಘಟನೆ ನಡೆದಿದೆ. ಡಿ. 31ರ ರಾತ್ರಿ 10 ಗಂಟೆಗೆ ಪೊಲೀಸರಿಗೆ ಅನಾಮಿಕ ಕರೆಯೊಂದು ಬಂದಿತ್ತು. ಪಕ್ಕದ ಫ್ಲ್ಯಾಟ್​ನಲ್ಲಿ ಭಾರೀ ಗಲಾಟೆ ನಡೆಯುತ್ತಿದೆ. ಗುಂಡಿನ ಸಪ್ಪಳವೂ ಕೇಳುತ್ತಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಪಾರ್ಟ್​ಮೆಂಟ್​ಗೆ ತೆರಳಿ ಫ್ಲಾಟ್​ನ ಬಾಗಿಲು ತಟ್ಟಿದ ಮೂವರು ಪೊಲೀಸರಿಗೆ ಒಳಗಿನಿಂದ ‘ನೋ ಟೆರಿ’ ಎಂದು ಮಹಿಳೆ ಕಿರುಚುತ್ತಿರುವುದು ಕೇಳಿಸಿತ್ತು.

ಮನೆಯ ಬಾಗಿಲು ತಳ್ಳಿ ಒಳಗೆ ಹೋಗಲು ನೋಡಿದ ಪೊಲೀಸರಿಗೆ ಒಳಗಿನಿಂದ ಗುಂಡಿನ ಸಪ್ಪಳ ಕೇಳಿಸಿತ್ತು. ಮಹಿಳೆಯ ಕೂಗು ಕೂಡ ನಿಂತಿತ್ತು. ಆಗಂತುಕ ತಮ್ಮ ಮೇಲೂ ದಾಳಿ ನಡೆಸಬಹುದು ಎಂದು ಬಾಗಿಲಿನಿಂದ ಹಿಂದೆ ಸರಿದು, ಬಾಗಿಲಿನತ್ತ ಪಿಸ್ತೂಲ್ ಗುರಿಯಿಟ್ಟ ಪೊಲೀಸರು ಆರೋಪಿ ಹೊರಬರುವ ಸಮಯಕ್ಕಾಗಿ ಕಾದಿದ್ದರು. ಆಗ ಬಾಗಿಲು ತೆರೆದು ಹೊರಬಂದ ಆರೋಪಿ ತನ್ನ ಕೈಗಳನ್ನು ಮೇಲಕ್ಕೆ ಎತ್ತಿ ‘ನನ್ನನ್ನು ಸಾಯಿಸಿ’ ಎಂದು ಕಿರುಚತೊಡಗಿದ್ದ.

ಮನೆಯಿಂದ ಹೊರಬಂದ 57 ವರ್ಷದ ಟೆರಿ ಹಡ್ಸನ್ ತಪ್ಪಿಸಿಕೊಂಡರೆ ಕಷ್ಟವೆಂದು ಆತನ ಮೇಲೆ ಪೊಲೀಸರು ಗುಂಡು ಹಾರಿಸಿದರು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಹಡ್ಸನ್ ಸಾವನ್ನಪ್ಪಿದ್ದಾನೆ. ಮನೆಯೊಳಗೆ ಹೋಗಿ ನೋಡಿದಾಗ 58 ವರ್ಷದ ಡಾನಾ ವೆಲ್ಸ್​ ಎಂಬ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಈ ಗಲಾಟೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಯ ಕಾಲಿಗೆ ಗುಂಡು ತಗುಲಿದ್ದು, ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಡಾನಾ ಅವರನ್ನು ಕೊಲೆ ಮಾಡಲು ಕಾರಣವೇನೆಂಬುದು ಇನ್ನೂ ಪತ್ತೆಯಾಗಿಲ್ಲ.

Comments are closed.