ಕರ್ನಾಟಕ

ಹಿಂದೂ ಧರ್ಮದ ಸುಧಾರಣೆಗೆ ಅವಿರತವಾಗಿ ಪ್ರಯತ್ನ ಮಾಡುತ್ತಾ ಬಂದವರು ವಿಶ್ವೇಶ ತೀರ್ಥರು; ಸಂತಾಪ ಸೂಚಿಸಿದ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ಧಾರೆ. ಪೇಜಾವರ ಶ್ರೀಗಳ ಅಗಲಿಕೆಗೆ ಟ್ವೀಟ್​​ ಮೂಲಕ ತೀವ್ರ ಸಂತಾಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಹಿಂದೂ ಧರ್ಮದ ಸುಧಾರಣೆಗೆ ಅವಿರತವಾಗಿ ಪ್ರಯತ್ನ ಮಾಡುತ್ತಾ ಬಂದವರು ವಿಶ್ವೇಶ ತೀರ್ಥರು. ನೇರ ನಡೆ-ನುಡಿಯ ಮೂಲಕ ಎಲ್ಲರ ಪ್ರೀತಿ-ಅಭಿಮಾನಕ್ಕೆ ಪಾತ್ರರಾಗಿದ್ದರು. ಹಾಗಯೇ ಸದಾ ಹೊಸ ಆಲೋಚನೆಗಳ ಪ್ರಯೋಗ ಶೀಲ ಮನಸ್ಸು ಹೊಂದಿದ್ದರು. ಪೂಜ್ಯರಾದ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ನಿಧನಕ್ಕೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.

ಹಾಗಯೇ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯ, ವಿಶ್ವೇಶ್ವರ ತೀರ್ಥ ಶ್ರೀಗಳು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲೂ ಶ್ರೀಗಳು ತೊಡಗಿಸಿಕೊಂಡಿದ್ದರು. ಕೊನೆವರೆಗೂ ಸಕ್ರಿಯವಾಗಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ಷೇತ್ರ ಗಳಲ್ಲಿ ತೊಡಗಿಸಿಕೊಂಡಿದ್ದರು. ಸಮಾಜದ ಬದಲಾವಣೆಗೆ ಶ್ರೀಗಳು ಪ್ರಯತ್ನ ಮಾಡಿದರು. ಮೈಸೂರಿನ ಕೈಲಾಸಪುರಂನ ದಲಿತರ ಕೇರಿಗಳಿಗೆ ಶ್ರೀಗಳು ಭೇಟಿ ನೀಡಿದ್ದರು. ರಂಜಾನ ಹಬ್ಬದ ಪ್ರಯುಕ್ತ ಇಫ್ತಿಯಾರ್ ಕೂಟ ಕೂಡ ಆಯೋಜಿಸಿದ್ದರು. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ. ಶ್ರೀಗಳ ಅಂತಿಮ ದರ್ಶನಕ್ಕೆ ಹೋಗ್ತೇನೆ. ಮಠಕ್ಕೆ ಹೋಗಬಾರದು ಅಂತೇನಿರಲಿಲ್ಲ. ವೈಚಾರಿಕ ಭಿನ್ನಾಭಿಪ್ರಾಯಗಳು ಇರಬಹುದು ಆದರೆ ಧಾರ್ಮಿಕ ಭಿನ್ನಾಭಿಪ್ರಾಯ ಇರಲಿಲ್ಲ. ಮಠಕ್ಕೆ ಹೋಗುವ ಅವಕಾಶ ಸಿಕ್ಕಿರಲಿಲ್ಲ. ರಾಜಕೀಯವಾಗಿ ಭಿನ್ನಾಭಿಪ್ರಾಯ ಇತ್ತು. ಸಿಕ್ಕಾಗಲೆಲ್ಲಾ ಉತ್ತಮವಾಗಿಯೇ ಮಾತನಾಡಿದ್ದೇವೆ. ನಾನು ಕೃಷ್ಣ ಮಠಕ್ಕೆ ಹೋಗಿಲ್ಲ ಅಂತಲ್ಲ. ಹೋಗುವ ಸಂದರ್ಭ ಬಂದಿರಲಿಲ್ಲ ಎಂದಿದ್ಧಾರೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಅಗ್ರಗಣ್ಯ ನಾಯಕರು ಶ್ರೀಗಳ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ಧಾರೆ. ಕೇಂದ್ರ ಗೃಹ ಸಚಿವ ಅಮಿತ್​​ ಶಾ, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಧನಾತ್ಮಕತೆಯ ಕೊನೆಯಿಲ್ಲ ಮೂಲ. ಅವರ ಬೋಧನೆ ಮತ್ತು ಚಂತನೆ ಯಾವಾಗಲು ನಮಗೆ ಮಾರ್ಗದರ್ಶಿಯಾಗಿರುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ. ಇನ್ನು, ಉಡುಪಿ ಪೇಜಾವರ ಶ್ರೀಗಳು ಲಕ್ಷಾಂತರ ಜನರ ಮನದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ. ಇವರ ಸೇವೆ ಮತ್ತು ಆಧ್ಯಾತ್ಮಿಕತೆ ಅತ್ಯಂತ ಶಕ್ತಿಶಾಲಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ. ಸ್ವಾಮೀಜಿ ಜತೆಗಿನ ಒಡನಾಟ ನೆನೆದು ಭಾವುಕರಾದ ಯಡಿಯೂರಪ್ಪ, ‘ನಾನು ಸ್ವಾಮೀಜಿಯೊಂದಿಗೆ 50 ವರ್ಷಗಳಿಂದ ನಿರಂತರ ಸಂಪರ್ಕದಲ್ಲಿದ್ದೇವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂಬುದು ಅವರ ಕನಸಾಗಿತ್ತು. ಈಗ ಸುಪ್ರೀಂಕೋರ್ಟ್​ ರಾಮಮಂದಿರ ನಿರ್ಮಾಣಕ್ಕೆ ತೀರ್ಪು ನೀಡಿದೆ, ಆದರೆ ನೋಡಲು ಮಾತ್ರ ಶ್ರೀಗಳು ಇಲ್ಲ ಎಂದು ದುಃಖಿತರಾಗಿದ್ದಾರೆ.

ಇಂದು ಉಡುಪಿ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಸ್ವಾಮೀಜಿ ಚಿಕಿತ್ಸೆ ಫಲಕಾರಿಯಾಗದೆ ಮಠದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ ಸುಮಾರು 9.20ಕ್ಕೆ ಕೊನೆಯುಸಿರೆಳೆದಿರುವ ಪೇಜಾವರ ಶ್ರೀಗಳ ಅಂತಿಮ ದರ್ಶನಕ್ಕೆ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವ್ಯವಸ್ಥೆ ಮಾಡಿದೆ. ಮಧ್ಯಾಹ್ನ 2 ಗಂಟೆಯ ಬಳಿಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಾಗುವುದು.

ಮಧ್ಯಾಹ್ನ ಏರ್​ಲಿಫ್ಟ್​ ಮೂಲಕ ಶ್ರೀಗಳ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಾಗುವುದು. ಇಂದು ಸಂಜೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಇಂದು ರಾತ್ರಿಯೇ ಬೆಂಗಳೂರಿನಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನಡೆಸಲಾಗುವುದು . ಪೇಜಾವರ ಶ್ರೀಗಳ ಅಗಲಿಕೆಗೆ ದೇಶದ ಅಗ್ರಗಣ್ಯ ನಾಯಕರಂತೆಯೇ ಉಡುಪಿ ಮಠದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಭಕ್ತರು ಕಂಬನಿ ಮಿಡಿದಿದ್ದಾರೆ.

Comments are closed.