ಮಂಗಳೂರು, ಡಿಸೆಂಬರ್.25: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರದ ಪ್ರತಿಭಟನೆ ಸಂದರ್ಭ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟವರು ಅಂದು ನಡೆದ ಹಿಂಸಾಚಾರ ಪ್ರಕರಣದ ಆರೋಪಿಗಳಾಗಿದ್ದರೆ ಸಂತ್ರಸ್ತ ಕುಟುಂಬಗಳಿಗೆ ಸರಕಾರದ ವತಿಯಿಂದ ಒಂದು ರೂಪಾಯಿಯು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬುಧವಾರ ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರದ ಪ್ರತಿಭಟನೆಯ ಸಂದರ್ಭ ಗೋಲಿಬಾರ್‌ಗೆ ಬಲಿಯಾದವರು ಅಪರಾಧಿಗಳಾಗಿದ್ದರೆ ಪರಿಹಾರ ನೀಡುವುದು ಅಕ್ಷಮ್ಯ ಅಪರಾಧವಾಗುತ್ತದೆ .”ಅಪರಾಧ ಸಾಬೀತಾದರೆ, ಒಂದು ರೂಪಾಯಿಯು ಕೊಡಲ್ಲ. ಈ ಕುರಿತು ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಮೃತರು ಹಿಂಸಾಚಾರದಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಗೋಲಿಬಾರ್‌ನಲ್ಲಿ ಮೃತ ಪಟ್ಟವರಿಗೆ ಪರಿಹಾರ ಘೋಷಣೆ ಮಾಡಿಲ್ಲ” ಎಂದು ಹೇಳಿದರು. ಇದಕ್ಕೂ ಮೊದಲು ಸೆರ್ಕ್ಯೂಟ್ ಹೌಸ್‌ನಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಈ ಘಟನೆಯ ಪ್ರಸಕ್ತ ಬೆಳವಣಿಗೆಯ ಕುರಿತು ಮಾಹಿತಿ ಪಡೆದರು.
ಇದೇ ವಿಚಾರವಾಗಿ ಮಾತನಾಡಿರುವ ಸಂಸದೆ ಶೋಭಾ ಕರಂದ್ಲಾಜೆ, ಗೋಲಿಬಾರ್‌ಗೆ ಬಲಿಯಾದವರಿಗೆ ಸರಕಾರ ಪರಿಹಾರ ಘೋಷಿಸಿದ್ದು ಮಾತ್ರ ನೀಡಿಲ್ಲ. ಅವರು ಅಪರಾಧಿಗಳಾಗಿದ್ದರೆ ಪರಿಹಾರ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರ ಸಂದರ್ಭ ಪರಿಸ್ಥಿತಿ ಹತೊಟಿಗೆ ತರಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ಈ ವೇಳೆ ಗೋಲಿಬಾರ್ ನಲ್ಲಿ ಕಂದೂಕ ನಿವಾಸಿ ಅಬ್ದುಲ್ ಜಲೀಲ್ ಮತ್ತು ಕುದ್ರೋಳಿ ಬೆಂಗರೆ ನಿವಾಸಿ ನೌಶೀನ್ ಎಂಬವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.
ಘಟನೆ ಬಳಿಕ ಡಿ.2೧ರಂದು ಮಂಗಳೂರಿಗೆ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು,ಗೋಲಿಬಾರ್‌ಗೆ ಬಲಿಯಾದವರ ಕುಟುಂಬಸ್ಥರು ತನ್ನನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮುಖಂಡರೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಅವರಿಗೆ ಜಿಲ್ಲಾಧಿಕಾರಿಗಳಲ್ಲಿ ಸೂಕ್ತ ಪರಿಕಾರ ನೀಡಲು ತಿಳಿಸಿದ್ದೇನೆ ಎಂದು ಹೇಳಿದ್ದರು.
ಬಳಿಕ ಮರುದಿನ ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಗುಂಡೇಟಿಗೆ ಬಲಿಯಾದ ಎರಡು ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು.
Comments are closed.